ಚೆನ್ನೈ: ಗ್ಲಾಮರ್ ಪ್ರಪಂಚದ ಹಿಂದೆ ಅದೆಷ್ಟು ನೋವುಗಳು ಅಡಗಿರುತ್ತವೆಯೋ ಯಾರಿಗೂ ತಿಳಿಯದು! ತಮಿಳು ಕಿರುತೆರೆಯ ‘ಕಾಯಲ್’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ ಈಗ ಕೇವಲ ನೆನಪು ಮಾತ್ರ. ಚೆನ್ನೈನ ಅಯ್ಯಪ್ಪನ್ ತಂಗಲ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಸುಭಾಷಿಣಿ ಆತ್ಮಹತ್ಯೆಗೆ ಶರಣಾಗಿರುವುದು ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.

ವಿಡಿಯೋ ಕಾಲ್ ಜಗಳವೇ ಮುಳುವಾಯ್ತಾ?
ಪೊಲೀಸ್ ಮೂಲಗಳ ಪ್ರಕಾರ, ಸುಭಾಷಿಣಿ ಮತ್ತು ಅವರ ಪತಿ ಬಿಬಿನ್ ಚಂದ್ರ ನಡುವೆ ಕುಟುಂಬದ ವಿಚಾರವಾಗಿ ದೊಡ್ಡ ಮಟ್ಟದ ಜಗಳ ನಡೆದಿತ್ತು ಎನ್ನಲಾಗಿದೆ. ಘಟನೆ ನಡೆದ ದಿನ ಪತಿ ಬಿಬಿನ್ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗಲೂ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಇದೇ ಮಾನಸಿಕ ಒತ್ತಡದಲ್ಲಿ ನಟಿ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರೇಮದ ಸುರಿಮಳೆ, ವಾಸ್ತವದಲ್ಲಿ ವಿರಹ?
ಅಚ್ಚರಿಯೆಂದರೆ, ಸುಭಾಷಿಣಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಬಿಬಿನ್ ಜೊತೆಗಿನ ಫೋಟೋಗಳನ್ನು ಸದಾ ಹಂಚಿಕೊಳ್ಳುತ್ತಿದ್ದರು. ಕಳೆದ ವ್ಯಾಲೆಂಟೈನ್ಸ್ ಡೇ ದಿನ “ನಾನು ಪ್ರಾರ್ಥಿಸಿ ಪಡೆದ ಪತಿ, ನನ್ನ ಬೆಸ್ಟ್ ಫ್ರೆಂಡ್…” ಎಂದು ಭಾವುಕವಾಗಿ ಬರೆದುಕೊಂಡಿದ್ದರು. ಮಾರ್ಚ್ 10 ರಂದು ಪತಿಯ ವಿಡಿಯೋ ಹಾಕಿ “ಇಂದಿಗೂ ನಿನ್ನ ಮೇಲೆ ಮೊದಲ ದಿನದಷ್ಟೇ ಪ್ರೀತಿ ಇದೆ” ಎಂದಿದ್ದ ಸುಭಾಷಿಣಿ, ಏಪ್ರಿಲ್ ತಿಂಗಳಲ್ಲೇ ಸಾವಿನ ಹಾದಿ ಹಿಡಿದಿದ್ದು ಅವರ ಅಭಿಮಾನಿಗಳಲ್ಲಿ ಸಂಶಯ ಮೂಡಿಸಿದೆ.

ಶ್ರೀಲಂಕಾದಿಂದ ಬೆಳ್ಳಿತೆರೆಯವರೆಗೆ:
ಮೂಲತಃ ಶ್ರೀಲಂಕಾದವರಾದ ಸುಭಾಷಿಣಿ, 2012ರಲ್ಲಿ ‘ಇನಿ ಅವನ್’ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರು. ನಂತರ ಕಿರುತೆರೆಯಲ್ಲಿ ಸಾಲು ಸಾಲು ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ಸದ್ಯ ಪೊಲೀಸರು ಸುಭಾಷಿಣಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪತಿ ಬಿಬಿನ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಬಣ್ಣದ ಲೋಕಕ್ಕೂ, ನಾಲ್ಕು ಗೋಡೆಗಳ ನಡುವಿನ ಕಟು ವಾಸ್ತವಕ್ಕೂ ಅದೆಷ್ಟು ವ್ಯತ್ಯಾಸವಿದೆ ಎಂಬುದಕ್ಕೆ ಈ ಸಾವು ಮತ್ತೊಂದು ಸಾಕ್ಷಿಯಾಗಿದೆ.