ಹುಬ್ಬಳ್ಳಿ ಲವ್‌ಜಿಹಾದ್: 70 ಸಾವಿರ ಲೂಟಿ, 10 ಬಾರಿ ಅಬಾರ್ಷನ್-ಜಿಮ್ ಟ್ರೈನರ್ ಸಮೀರ್‌ ಕರಾಳ ಮುಖ ಬಹಿರಂಗ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಸಮೀರ್ ಎಂಬಾತನ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ಕತೆಗಳು ಈಗ ಒಂದೊಂದಾಗಿ ಹೊರಬರುತ್ತಿದ್ದು, ಕೇಳಿದವರ ಮೈ ಜುಂ ಎನ್ನುವಂತಿವೆ. ಪ್ರೀತಿಯ ನಾಟಕವಾಡಿ ಯುವತಿಯನ್ನು ಬಲೆಗೆ ಬೀಳಿಸಿಕೊಂಡಿದ್ದ ಸಮೀರ್, ಆಕೆಯನ್ನು ಕೇವಲ ಲೈಂಗಿಕವಾಗಿ ಬಳಸಿಕೊಳ್ಳುವುದಷ್ಟೇ ಅಲ್ಲದೆ, ಹಣ ವಸೂಲಿ ಮಾಡುವ ಎಟಿಎಂ ಆಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಎಸಗುತ್ತಿದ್ದ ಸಮೀರ್, ಪ್ರತಿ ಬಾರಿ ಲೈಂಗಿಕ ದೌರ್ಜನ್ಯದ ಬಳಿಕ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ. ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಹೆದರಿದ ಸಂತ್ರಸ್ತೆ ಹಂತ ಹಂತವಾಗಿ 5 ಸಾವಿರ, 20 ಸಾವಿರ, 25 ಸಾವಿರದಂತೆ ಒಟ್ಟು 70 ಸಾವಿರಕ್ಕೂ ಅಧಿಕ ಹಣವನ್ನು ಆತನಿಗೆ ವರ್ಗಾಯಿಸಿದ್ದಾರೆ. ಈ ಹಣದ ವರ್ಗಾವಣೆಯ ಡಿಜಿಟಲ್ ಸ್ಕ್ರೀನ್‌ಶಾಟ್‌ಗಳು ಈಗ ಪೊಲೀಸರ ಕೈಸೇರಿದ್ದು, ಸಮೀರ್‌ನ ಸುಲಿಗೆಕೋರ ಮುಖವಾಡ ಕಳಚಿಬಿದ್ದಿದೆ.

ಪೊಲೀಸರು ಸಮೀರ್‌ನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಅಕ್ಷರಶಃ ಬೆಚ್ಚಿಬೀಳುವಂತಹ ದೃಶ್ಯಗಳು ಕಂಡುಬಂದಿವೆ. ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗಿದ ಬಳಿಕ ಆಕೆಗೆ ಬಲವಂತವಾಗಿ ಗರ್ಭಪಾತದ ಮಾತ್ರೆಗಳನ್ನು ಕೊಡಿಸುತ್ತಿದ್ದ. ಅಷ್ಟೇ ಅಲ್ಲ, ಆಕೆ ಮಾತ್ರೆ ನುಂಗುತ್ತಿದ್ದಾಳೆಯೇ ಇಲ್ಲವೇ ಎಂಬ ಖಾತ್ರಿಗಾಗಿ “ಮಾತ್ರೆ ತೆಗೆದುಕೊಳ್ಳುವಾಗ ವಿಡಿಯೋ ಮಾಡಿ ಕಳಿಸು” ಎಂದು ಒತ್ತಡ ಹೇರುತ್ತಿದ್ದ. ಸುಮಾರು 8 ರಿಂದ 10 ಬಾರಿ ಆಕೆಗೆ ಗರ್ಭಪಾತ ಮಾಡಿಸಿರುವುದು ಆತನ ಮೊಬೈಲ್‌ನಲ್ಲಿರುವ ವಿಡಿಯೋಗಳಿಂದ ಸಾಬೀತಾಗಿದೆ.

 

ಸಮೀರ್ ಮೊಬೈಲ್‌ನಲ್ಲಿ ಕೇವಲ ಈ ಯುವತಿಯಷ್ಟೇ ಅಲ್ಲದೆ, ಇನ್ನೂ ಅನೇಕ ಯುವತಿಯರೊಂದಿಗೆ ನಡೆಸಿರುವ ವಾಟ್ಸಪ್ ಚಾಟ್‌ಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ. ಇದು ಕೇವಲ ಒಂದು ಪ್ರಕರಣವೋ ಅಥವಾ ಹಲವು ಯುವತಿಯರನ್ನು ಈತ ಬಲೆಗೆ ಬೀಳಿಸಿದ್ದನೋ ಎಂಬ ಸಂಶಯ ಈಗ ದಟ್ಟವಾಗಿದೆ.

ಸದ್ಯ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಪೊಲೀಸರು ಸಮೀರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಸಮೀರ್ ಕೂಡ ಕಿಡ್ನ್ಯಾಪ್ ಕೇಸ್ ದಾಖಲಿಸುವ ಮೂಲಕ ಪ್ರತಿರೋಧ ತೋರಲು ಯತ್ನಿಸಿದ್ದಾನೆ. ಆದರೆ ಡಿಜಿಟಲ್ ಸಾಕ್ಷ್ಯಗಳು ಆತನ ಕೊರಳಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ.

error: Content is protected !!