ಸಿದ್ದರಾಮಯ್ಯ ಸೀಟಿಗೆ ಸದ್ಯಕ್ಕಿಲ್ಲ ಕುತ್ತು! ‘ಪರಂ’ ಬಿಚ್ಚಿಟ್ಟ ಹೈಕಮಾಂಡ್ ಗುಟ್ಟು: ಡಿಕೆಶಿಗೆ ಶುರುವಾಯ್ತಾ ದಿಗಿಲು?

ಮೈಸೂರು: ರಾಜ್ಯ ರಾಜಕಾರಣದ ಹಜಾರದಲ್ಲಿ ‘ಮುಂದಿನ ಸಿಎಂ ಯಾರು?’ ಎಂಬ ಪ್ರಶ್ನೆ ಹರಿದಾಡುತ್ತಿರುವಾಗಲೇ, ಗೃಹ ಸಚಿವ ಜಿ. ಪರಮೇಶ್ವರ ಅವರು ಮೈಸೂರಿನ ಮಣ್ಣಿನಲ್ಲಿ ನಿಂತು ಬಾಂಬ್ ಒಂದನ್ನು ಸಿಡಿಸಿದ್ದಾರೆ. “ಸಿದ್ದರಾಮಯ್ಯ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ” ಎಂದು ಹೇಳುವ ಮೂಲಕ, ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಹಲವು ನಾಯಕರಿಗೆ ಪರೋಕ್ಷವಾಗಿ ‘ಶಾಕ್’ ನೀಡಿದ್ದಾರೆ.

ಹೈಕಮಾಂಡ್ ಹೆಸರಿನಲ್ಲಿ ಪರಂ ಬ್ಯಾಟಿಂಗ್!
ಸೋಮವಾರ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪರಮೇಶ್ವರ, ಹೈಕಮಾಂಡ್‌ನ ನಿಲುವನ್ನು ಬಿಚ್ಚಿಟ್ಟರು. “2013ರಲ್ಲೂ ಹೈಕಮಾಂಡ್ ಐದು ವರ್ಷ ಇವರೇ ಸಿಎಂ ಎಂದು ಹೇಳಿರಲಿಲ್ಲ, ಆದರೂ ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸಿದ್ದರು. ಈಗಲೂ ಹೈಕಮಾಂಡ್ ಗೊಂದಲ ಸೃಷ್ಟಿಸಿಲ್ಲ. ಬದಲಾವಣೆ ಬಗ್ಗೆ ಮಾತೇ ಇಲ್ಲ ಎಂದ ಮೇಲೆ ಸಿದ್ದರಾಮಯ್ಯ ಅವರೇ 2028ರವರೆಗೆ ಬಾಸ್!” ಎಂದು ಖಡಾಖಡಿಯಾಗಿ ನುಡಿದರು.

ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಚಾಣಾಕ್ಷ ಉತ್ತರ ನೀಡಿದ ಗೃಹ ಸಚಿವರು, “ಡಿಕೆಶಿ ನಮ್ಮ ನಾಯಕರು, ಅವರಿಗೇನು ಸಮಸ್ಯೆಯಿಲ್ಲ. ಆದರೆ ಸಿಎಂ ಆಗಲು ನಾನೂ ಅರ್ಹ, ನೀವೂ ಅರ್ಹ ಎಂದು ಸಿದ್ದರಾಮಯ್ಯ ಅವರೇ ಅಧಿವೇಶನದಲ್ಲಿ ಹೇಳಿದ್ದಾರಲ್ಲವೇ?” ಎನ್ನುವ ಮೂಲಕ ತಾವೂ ರೇಸ್‌ನಲ್ಲಿರುವುದನ್ನು ಮಾರ್ಮಿಕವಾಗಿ ಸೂಚಿಸಿದರು.

ಇನ್ನು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, “ಈ ಫಲಿತಾಂಶ ನಮ್ಮ ಸರ್ಕಾರಕ್ಕೆ ನೀಡುವ ಅಂಕವಲ್ಲ, ಅಥವಾ ಇದು ದಿಕ್ಸೂಚಿಯೂ ಅಲ್ಲ. ಆದರೆ ಗ್ಯಾರಂಟಿ ಯೋಜನೆಗಳ ಮೇಲೆ ನಮಗೆ ನಂಬಿಕೆಯಿದೆ, ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ ಪರಮೇಶ್ವರ, ಅಡುಗೆ ಅನಿಲ ಕಾಳಸಂತೆ ದಂಧೆಯ ಬಗ್ಗೆಯೂ ಪೊಲೀಸರ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಪರಮೇಶ್ವರ ಅವರ ಈ ಹೇಳಿಕೆ ‘ಸಿದ್ದರಾಮಯ್ಯ ಬಣ’ಕ್ಕೆ ಆನೆಬಲ ತಂದಿದ್ದರೆ, ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ತಣ್ಣೀರೆರಚಿದಂತಾಗಿದೆ!

error: Content is protected !!