ನವದೆಹಲಿ: ಭಾರತಕ್ಕೆ ಬರಬೇಕಿದ್ದ ಇರಾನ್‌ನ ಕಚ್ಚಾ ತೈಲದ ಹಡಗು ಪಾವತಿ ವಿಳಂಬದ ಕಾರಣದಿಂದಾಗಿ ಚೀನಾದತ್ತ ತಿರುಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು “ಸತ್ಯಕ್ಕೆ ದೂರವಾದುದು” ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮಾಹಿತಿಗಳು ತಪ್ಪು ದಾರಿಗೆಳೆಯುವಂತಿವೆ ಎಂದು ಸರ್ಕಾರ ತಿಳಿಸಿದೆ.

ಏನಿದು ವಿವಾದ?
ಶಿಪ್-ಟ್ರ್ಯಾಕಿಂಗ್ ಸಂಸ್ಥೆಯಾದ ‘ಕೆಪ್ಲರ್’ (Kpler) ನೀಡಿದ ವರದಿಯ ಪ್ರಕಾರ, ‘ಪಿಂಗ್ ಶುನ್’ (Ping Shun) ಎಂಬ ತೈಲ ಟ್ಯಾಂಕರ್ ಮೊದಲು ಗುಜರಾತ್‌ನ ವಾದಿನಾರ್‌ಗೆ ಬರಬೇಕಿತ್ತು. ಆದರೆ, ಹಾದಿ ಮಧ್ಯೆಯೇ ಅದು ಚೀನಾದ ಡಾಂಗ್‌ಯಿಂಗ್‌ನತ್ತ ಮುಖ ಮಾಡಿತ್ತು. 2019ರ ನಂತರ ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಮೊದಲ ತೈಲ ಆಮದು ಇದಾಗಿತ್ತು ಎಂದು ಹೇಳಲಾಗಿತ್ತು. ಪಾವತಿ ಸಮಸ್ಯೆಯಿಂದಾಗಿ ಈ ಬದಲಾವಣೆ ನಡೆದಿದೆ ಎಂಬ ವದಂತಿ ಹಬ್ಬಿತ್ತು.
ಈ ಬಗ್ಗೆ ಎಕ್ಸ್ (X) ನಲ್ಲಿ ಸ್ಪಷ್ಟನೆ ನೀಡಿರುವ ಸಚಿವಾಲಯ, “ಇರಾನ್ ತೈಲ ಹಡಗು ಪಾವತಿ ಸಮಸ್ಯೆಯಿಂದಾಗಿ ಚೀನಾದತ್ತ ತಿರುಗಿದೆ ಎಂಬ ವರದಿಗಳು ಸಂಪೂರ್ಣ ಸುಳ್ಳು. ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ವಾಣಿಜ್ಯ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ ಹಡಗುಗಳು ಸಮುದ್ರದ ಮಧ್ಯೆಯೇ ತಮ್ಮ ನಿಗದಿತ ಬಂದರನ್ನು ಬದಲಾಯಿಸುವುದು ಜಾಗತಿಕ ತೈಲ ವ್ಯಾಪಾರದಲ್ಲಿ ಸಾಮಾನ್ಯ ಪ್ರಕ್ರಿಯೆ” ಎಂದು ತಿಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವಿದ್ದರೂ, ಭಾರತೀಯ ತೈಲ ಕಂಪನಿಗಳು ಮುಂದಿನ ತಿಂಗಳುಗಳಿಗೆ ಬೇಕಾದಷ್ಟು ಕಚ್ಚಾ ತೈಲವನ್ನು ಈಗಾಗಲೇ ಕಾಯ್ದಿರಿಸಿವೆ. ಇರಾನ್ ಸೇರಿದಂತೆ ಯಾವುದೇ ದೇಶದಿಂದ ತೈಲ ಆಮದು ಮಾಡಿಕೊಳ್ಳಲು ಪಾವತಿಯ ಅಡೆತಡೆಗಳಿಲ್ಲ ಎಂದು ಸಚಿವಾಲಯ ಪುನರುಚ್ಚರಿಸಿದೆ.
ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಬೆಲೆಯನ್ನು ಸ್ಥಿರಗೊಳಿಸಲು ವಾಷಿಂಗ್ಟನ್ ಕಳೆದ ತಿಂಗಳು ಇರಾನ್ ತೈಲ ಆಮದಿಗೆ 30 ದಿನಗಳ ಕಾಲ ವಿನಾಯಿತಿ ನೀಡಿತ್ತು. ಈ ವಿನಾಯಿತಿಯು ಏಪ್ರಿಲ್ 19ಕ್ಕೆ ಕೊನೆಗೊಳ್ಳಲಿದೆ. 2018ರ ಮೊದಲು ಭಾರತವು ಇರಾನ್‌ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲಿ ಒಂದಾಗಿತ್ತು. ಆದರೆ, 2019ರ ಮೇ ತಿಂಗಳಲ್ಲಿ ಅಮೆರಿಕ ನಿರ್ಬಂಧ ಹೇರಿದ ನಂತರ ಭಾರತ ಇರಾನ್‌ನಿಂದ ತೈಲ ಆಮದನ್ನು ಸ್ಥಗಿತಗೊಳಿಸಿತ್ತು.
