ಮಂಗಳೂರು: ಕರಾವಳಿ ಜನರನ್ನು ನಂಬಿಸಿ ಹಣ ದೋಚಲು ಸೈಬರ್ ಖದೀಮರು ಈಗ ʻಮ್ಯಾರಥಾನ್’ ಎಂಬ ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ಕಾಂತಾರ ಚಿತ್ರದ ಹಾಡನ್ನು ಬಳಸಿಕೊಂಡ ಖದೀಮರು, ಏಪ್ರಿಲ್ 19ರಂದು ಮಂಗಳೂರಿನಲ್ಲಿ ʻಸೀ ಬ್ರೀಜ್’ ಹೆಸರಿನಲ್ಲಿ ಬೃಹತ್ ಮ್ಯಾರಥಾನ್ ನಡೆಯಲಿದೆ ಎಂಬ ನಕಲಿ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರುವಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಲಕ್ಷ ಲಕ್ಷ ಬಹುಮಾನದ ಆಮಿಷ:
ವಂಚಕರು ಹರಿಯಬಿಟ್ಟಿರುವ ಪೋಸ್ಟರ್‌ನಲ್ಲಿ ನಂಬಲಸಾಧ್ಯವಾದ ಬಹುಮಾನಗಳ ಆಫರ್ ನೀಡಲಾಗಿದೆ. 5 ಕಿ.ಮೀ ಓಟಕ್ಕೆ 5 ಲಕ್ಷ ರೂ., 10 ಕಿ.ಮೀಗೆ 3.5 ಲಕ್ಷ ರೂ. ಮತ್ತು 21 ಕಿ.ಮೀ ಓಟಕ್ಕೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಆಮಿಷ ಒಡ್ಡಲಾಗಿದೆ. ಈ ಓಟದಲ್ಲಿ ಪಾಲ್ಗೊಳ್ಳಲು ಮೊದಲೇ ನೋಂದಣಿ (Register) ಮಾಡಿಕೊಳ್ಳುವಂತೆ ಲಿಂಕ್ ನೀಡಲಾಗಿದ್ದು, ಇದುವೇ ಸೈಬರ್ ವಂಚನೆಯ ಮೊದಲ ಹಂತವಾಗಿದೆ.

ಲಿಂಕ್ ಕ್ಲಿಕ್ ಮಾಡಿದರೆ ಮೊಬೈಲ್ ಹ್ಯಾಕ್!
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್, “ಮಂಗಳೂರಿನಲ್ಲಿ ಇಂತಹ ಯಾವುದೇ ಮ್ಯಾರಥಾನ್ ಆಯೋಜನೆಯಾಗಿಲ್ಲ. ವಂಚಕರು ನೀಡಿರುವ ಲಿಂಕ್ ಬಳಸಿ ನೋಂದಣಿ ಮಾಡಲು ಹೋದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಆ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ದೋಚುವ ಹುನ್ನಾರ ಇದರ ಹಿಂದಿದೆ,” ಎಂದು ತಿಳಿಸಿದ್ದಾರೆ.
ಕಾಂತಾರ ಹಾಡಿನ ವಿಡಿಯೋ ಮೂಲಕ ಯಾಮರಿಸುವ ತಂತ್ರ:
ವಂಚಕರು ಜನರನ್ನು ನಂಬಿಸಲು ಕೇವಲ ಪೋಸ್ಟರ್ ಮಾತ್ರವಲ್ಲದೆ, ಒಂದು ವಿಡಿಯೋವನ್ನೂ ಹರಿಯಬಿಟ್ಟಿದ್ದಾರೆ. ಈ ವಿಡಿಯೋಗೆ ಹಿನ್ನೆಲೆಯಲ್ಲಿ ʻಕಾಂತಾರ’ ಸಿನಿಮಾದ ಹಾಡನ್ನು ಬಳಸಿ ಕರಾವಳಿಯ ಜನರಿಗೆ ಇದು ಸ್ಥಳೀಯ ಕಾರ್ಯಕ್ರಮವೆಂದು ಭಾಸವಾಗುವಂತೆ ಮಾಡಲಾಗಿದೆ. ಪೋಸ್ಟರ್‌ನಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿ ಉತ್ತರಿಸುತ್ತಿದ್ದು, ನೋಂದಣಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ ಎಂದು ವರದಿಯಾಗಿದೆ.

ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ನೀಡಬಾರದು. ಇಂತಹ ಬೃಹತ್ ಕಾರ್ಯಕ್ರಮಗಳ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ಖಚಿತಪಡಿಸಿಕೊಳ್ಳಬೇಕು.
ಹಣದ ಆಮಿಷ ಒಡ್ಡುವ ಪೋಸ್ಟ್‌ಗಳ ಬಗ್ಗೆ ಸಂಶಯವಿರಲಿ. ಒಂದು ವೇಳೆ ವಂಚನೆಗೊಳಗಾದರೆ ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಸದ್ಯ ಮಂಗಳೂರಿನಲ್ಲಿ ವೈರಲ್ ಆಗುತ್ತಿರುವ ಈ ಮ್ಯಾರಥಾನ್ ಸುದ್ದಿ ನಕಲಿ ಎನ್ನುವುದು ಪೊಲೀಸರಿಂದ ಬಯಲಾಗಿದೆ.