ನವದೆಹಲಿ/ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಐದನೇ ವಾರಕ್ಕೆ ಕಾಲಿಡುತ್ತಿದೆ. ಇತ್ತ ಭೂಮಿಯ ಮೇಲೆ ಬಾಂಬ್‌ಗಳು ಮಳೆಯಂತೆ ಸುರಿಯುತ್ತಿದ್ದರೆ, ಅತ್ತ ಸಮುದ್ರದ ನಡುವೆ ಸಾವಿರಾರು ಜೀವಿಗಳು ‘ಅನಾಥ’ವಾಗಿ ಸಾವಿನ ಕ್ಷಣಗಳನ್ನು ಎಣಿಸುತ್ತಿವೆ. ಇರಾನ್‌ನ ಬೆದರಿಕೆಯಿಂದಾಗಿ ಸ್ಥಗಿತಗೊಂಡಿರುವ ಹೊರ್ಮುಜ್ ಜಲಸಂಧಿ (Strait of Hormuz) ಇಂದು ವಿಶ್ವದ ಅತ್ಯಂತ ಅಪಾಯಕಾರಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಸುಮಾರು 2,000 ಬೃಹತ್ ಹಡಗುಗಳು ಮತ್ತು ಅವುಗಳಲ್ಲಿರುವ 20,000ಕ್ಕೂ ಹೆಚ್ಚು ನಾವಿಕರ ಬದುಕು ಈಗ ಅಯೋಮಯವಾಗಿದೆ.

ಅಂತರಾಷ್ಟ್ರೀಯ ಸಾರಿಗೆ ಕಾರ್ಮಿಕರ ಒಕ್ಕೂಟಕ್ಕೆ (ITF) ಬರುತ್ತಿರುವ ಸಂದೇಶಗಳು ಕಲ್ಲೆದೆಯನ್ನೂ ಕರಗಿಸುವಂತಿವೆ. ನಾವಿಕರು ಇಂಟರ್ನೆಟ್ ಸಿಕ್ಕ ಕೂಡಲೇ ನಡುರಾತ್ರಿಯಲ್ಲೂ ಕರೆ ಮಾಡಿ ವಿಲಪಿಸುತ್ತಿದ್ದಾರೆ. “ನಮ್ಮ ಬಳಿ ಆಹಾರವಿಲ್ಲ, ಕುಡಿಯಲು ಹನಿ ನೀರಿಲ್ಲ. ಹೊರಗೆ ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ. ನಮಗೆ ಸಾಯಲು ಇಷ್ಟವಿಲ್ಲ ಸರ್, ದಯವಿಟ್ಟು ನಮ್ಮನ್ನು ಇಲ್ಲಿಂದ ಹೊರಗೆ ಕರೆದೊಯ್ಯಿರಿ” ಎಂಬ ಆರ್ತನಾದಗಳು ಕೇಳಿಬರುತ್ತಿವೆ. ಅವರ ಪಾಲಿಗೆ ಸಮುದ್ರವು ಈಗ ವಿಶಾಲವಾದ ‘ನೀಲಿ ಗೋರಿ’ಯಂತೆ ಕಾಣುತ್ತಿದೆ.

ವಿಪರ್ಯಾಸವೆಂದರೆ, ಈ ಸಾವಿನ ಸುಳಿಯಲ್ಲಿ ಸಿಲುಕಿರುವವರ ಪೈಕಿ ಹೆಚ್ಚಿನವರು ಬಡತನದಿಂದ ಬಂದವರು. ದಿನಕ್ಕೆ ಕೇವಲ 16 ಡಾಲರ್ (ಸುಮಾರು ₹1,300) ಸಂಬಳಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಯುದ್ಧ ಪೀಡಿತ ಪ್ರದೇಶವೆಂದು ಘೋಷಣೆಯಾದ ಮೇಲೆ ಸಂಬಳ 32 ಡಾಲರ್‌ಗೆ ಏರಿಕೆಯಾಗುತ್ತದೆಯೇ ಎಂದು ನಾವಿಕರು ಕೇಳುತ್ತಿದ್ದಾರೆ ಎಂದರೆ, ಅವರ ಬಡತನವು ಸಾವಿನ ಭೀತಿಗಿಂತಲೂ ದೊಡ್ಡದಾಗಿದೆ ಎಂಬುದು ಎಂತಹ ದುರಂತ!

ಸಮುದ್ರಯಾನದ ಸಂಕೀರ್ಣ ಕಾನೂನುಗಳು ನಾವಿಕರನ್ನು ಈ ಸಂಕಷ್ಟದಿಂದ ಹೊರಬರದಂತೆ ಕಟ್ಟಿಹಾಕಿವೆ. ಒಂದು ಹಡಗು ಒಂದು ದೇಶಕ್ಕೆ ಸೇರಿದ್ದರೆ, ಅದರ ನೋಂದಣಿ ಮತ್ತೊಂದು ದೇಶದಲ್ಲಿರುತ್ತದೆ, ಮಾಲೀಕರು ಮಗದೊಂದು ದೇಶದವರಾಗಿರುತ್ತಾರೆ. ಈ ಗೊಂದಲದಲ್ಲಿ ನಾವಿಕರ ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ. ಹಡಗಿನ ಮಾಲೀಕರು ನಾವಿಕರ ಪ್ರಾಣಕ್ಕಿಂತಲೂ ತಮ್ಮ ‘ಸರಕು’ ಮತ್ತು ‘ವ್ಯಾಪಾರ’ಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ನಾವಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿ ಕೆಲಸ ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ.

ಈಗಾಗಲೇ ಈ ಸಂಘರ್ಷದಲ್ಲಿ 10 ನಾವಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಸಮುದ್ರಯಾನ ಸಂಸ್ಥೆ (IMO) ದೃಢಪಡಿಸಿದೆ. ಇರಾನ್‌ನ ಈ ದಿಗ್ಬಂಧನದಿಂದಾಗಿ ವಿಶ್ವದ ಶೇ. 20ರಷ್ಟು ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಂಡಿದ್ದು, ಜಗತ್ತಿನಾದ್ಯಂತ ಹಣದುಬ್ಬರ ಏರುತ್ತಿದೆ. ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಇಂಧನ ಭದ್ರತೆಯ ಆತಂಕ ಎದುರಾಗಿದೆ.