ಬಂಟ್ವಾಳ: ಕರಾವಳಿಯ ಬಿಸಿಲಿಗೆ ಬಿ.ಸಿ.ರೋಡ್ ತಲಪಾಡಿ ಈಗ ಮತ್ತಷ್ಟು ಕಾವೇರಿದೆ! ಅಲ್ಲಿನ ಆಟೋ ಗ್ಯಾಸ್ ಪಂಪ್‌ವೊಂದರಲ್ಲಿ ನಡೆಯುತ್ತಿರುವ ದರ ಸಮರ ಈಗ ರಸ್ತೆಗೆ ಬಂದು ನಿಂತಿದೆ. ಹಗಲಿರುಳು ಕಷ್ಟಪಟ್ಟು ದುಡಿಯುವ ರಿಕ್ಷಾ ಚಾಲಕರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.



ಸತತ ಎರಡನೇ ಬಾರಿಗೆ ರಿಕ್ಷಾ ಚಾಲಕರು ಪಂಪ್ ಮುಂದೆ ಸಾಲು ಸಾಲಾಗಿ ರಿಕ್ಷಾಗಳನ್ನು ನಿಲ್ಲಿಸಿ “ನಮ್ಮ ನ್ಯಾಯ ಸಿಗುವವರೆಗೂ ಕದಲುವುದಿಲ್ಲ” ಎಂದು ಅಬ್ಬರಿಸಿದ್ದಾರೆ. ಸರಕಾರ ನಿಗದಿ ಮಾಡಿದ ದರಕ್ಕಿಂತ ಇಲ್ಲಿ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ ಎಂಬುದು ಚಾಲಕರ ಗಂಭೀರ ದೂರು. ಅಷ್ಟೇ ಅಲ್ಲ, ದರದ ಬಗ್ಗೆ ಕೇಳಲು ಹೋದರೆ ಪಂಪ್‌ನವರು ದರ್ಪದ ಮಾತುಗಳಲ್ಲಿ ಬೆದರಿಕೆ ಹಾಕುತ್ತಾರಂತೆ!

ಕೆಲವೇ ದಿನಗಳ ಹಿಂದಷ್ಟೇ ಇದೇ ವಿಚಾರವಾಗಿ ಇಲ್ಲಿ ಕಿರಿಕ್ ಆಗಿತ್ತು. ಆಗ ಪೊಲೀಸರು ಬಂದು ಸಮಾಧಾನ ಪಡಿಸಿದ್ದರು. ಆದರೆ ಪಂಪ್ ಮಾಲೀಕರು ಮಾತ್ರ ಬುದ್ಧಿ ಕಲಿತಂತಿಲ್ಲ. ಮತ್ತೆ ದರದ ಗೊಂದಲ ಶುರುವಾಗಿದ್ದೇ ತಡ, ಚಾಲಕರು ರೊಚ್ಚಿಗೆದ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಈಗ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

