ವಿಶ್ವದ ಅತ್ಯಂತ ಹಳೆಯ ಚಿನ್ನದ ನಿಧಿ ಪತ್ತೆ: 6,000 ವರ್ಷಗಳ ಹಿಂದಿನ ಬಂಗಾರದ ರಹಸ್ಯ ಬಯಲು!

ಬಲ್ಗೇರಿಯಾ: ಅದು 1972ರ ಶರತ್ಕಾಲದ ಒಂದು ಸಾಯಂಕಾಲ. ಬಲ್ಗೇರಿಯಾದ ವರ್ನಾ ಎನ್ನುವ ಕರಾವಳಿ ನಗರದಲ್ಲಿ ಕೆಲವರು ಕೆಲಸಕ್ಕೆ ಅಂತ ಮಣ್ಣು ಅಗೆಯುತ್ತಿದ್ದರು. ಅಗೆಯುತ್ತಾ ಹೋದಂತೆ ಅಲ್ಲೊಂದು ಹಳೆಯ ಸ್ಮಶಾನದ ಅವಶೇಷಗಳು ಕಂಡವು. ಕೆಲಸಗಾರರು ಸುಮ್ಮನೆ ಕುತೂಹಲಕ್ಕೆ ನೋಡಿದರೆ, ಮಣ್ಣಿನ ಕೆಳಗೆ ಏನೋ ಒಂದು ಮಿಂಚುತ್ತಿತ್ತು. ಅರೆ! ಇದೇನಿದು ಅಂತ ಕೈ ಹಾಕಿ ನೋಡಿದರೆ, ಅದು ಅಪ್ಪಟ ಚಿನ್ನ!

ಹೌದು… ಅಲ್ಲಿ ಸಿಕ್ಕಿದ್ದು ಬರಿ ಚಿನ್ನವಲ್ಲ, ಇಡೀ ವಿಶ್ವದಲ್ಲೇ ಮನುಷ್ಯ ಮೊಟ್ಟಮೊದಲ ಬಾರಿಗೆ ತಯಾರಿಸಿದ ಬಂಗಾರದ ಆಭರಣಗಳು! ಸುಮಾರು 6,600 ವರ್ಷಗಳ ಹಿಂದಿನ ಮಾತು. ಇವತ್ತು ನಾವೆಲ್ಲಾ ಚಿನ್ನದ ಹಿಂದೆ ಹುಚ್ಚರಂತೆ ಓಡುತ್ತಿದ್ದೇವಲ್ಲ, ಆ ಕ್ರೇಜ್ ಶುರುವಾಗಿದ್ದೇ ಇಲ್ಲಿಂದ ಅಂತ ಕಾಣುತ್ತೆ.

ಪುರಾತತ್ವ ಇಲಾಖೆಯವರು ಅಲ್ಲಿನ 300ಕ್ಕೂ ಹೆಚ್ಚು ಸಮಾಧಿಗಳನ್ನು ಅಗೆದು ನೋಡಿದಾಗ ಒಂದು ಅಚ್ಚರಿ ಕಾದಿತ್ತು. 43ನೇ ನಂಬರಿನ ಸಮಾಧಿಯಲ್ಲಿದ್ದ ಒಬ್ಬ 60 ವರ್ಷದ ಮುದಿ ಮನುಷ್ಯನ ಅಸ್ಥಿಪಂಜರದ ಮೇಲೆ ಕೆಜಿಗಟ್ಟಲೆ ಬಂಗಾರವಿತ್ತು! ಅಷ್ಟೊಂದು ಬಂಗಾರ ಆ ಕಾಲದಲ್ಲಿ ಒಬ್ಬ ಮನುಷ್ಯನ ಸಮಾಧಿಯಲ್ಲಿ ಇತ್ತೆಂದರೆ, ಅವನು ಅಲ್ಲಿನ ಅರಸನೋ ಅಥವಾ ಅದ್ಭುತ ಮಾಂತ್ರಿಕನೋ ಆಗಿರಬೇಕು.

ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳು, ಕೈಯಲ್ಲಿದ್ದ ಬಳೆಗಳು, ಕಿವಿಯೋಲೆಗಳು ಇವೆಲ್ಲವೂ ಇವತ್ತಿನ ಡಿಸೈನ್ ಸೋಲಿಸುವಂತಿದ್ದವು. ಅಷ್ಟೇ ಯಾಕೆ, ಆತ ಹಿಡಿಯುತ್ತಿದ್ದ ಕೊಡಲಿಯ ಹಿಡಿಕೆ ಕೂಡ ಬಂಗಾರದ್ದೇ ಆಗಿತ್ತು! ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಸಿಕ್ಕಿದ್ದು ಒಂದು ʻಬಂಗಾರದ ಶಿಶ್ನ ಕವಚ’ (Gold Penis Sheath). ಅಂದರೆ ಆ ಕಾಲದ ಜನರಿಗೆ ಬಂಗಾರ ಅಂದರೆ ಬರಿ ಶೋಕಿ ಮಾತ್ರ ಆಗಿರಲಿಲ್ಲ, ಅದು ಅಧಿಕಾರ ಮತ್ತು ಪರಮಾಧಿಕಾರದ ಪರಮೋಚ್ಚ ಸಂಕೇತವಾಗಿತ್ತು!

ನಮಗೆಲ್ಲಾ ಅನಿಸಬಹುದು, ಸತ್ತ ಮೇಲೆ ಯಾಕೆ ಇಷ್ಟೊಂದು ಬಂಗಾರ ಅಂತ. ಆದರೆ ಇಲ್ಲಿ ಅಸಲಿ ವಿಷಯ ಬೇರೆಯೇ ಇದೆ. ಈ ವರ್ನಾ ಸ್ಮಶಾನದ ಆರು ಕಿಲೋ ಚಿನ್ನ ನಮಗೆ ಒಂದು ದೊಡ್ಡ ಸತ್ಯ ಹೇಳುತ್ತಿದೆ. ಸಮಾಜದಲ್ಲಿ ‘ಮೇಲು-ಕೀಳು’ ಮತ್ತು ‘ನಾಯಕ-ಪ್ರಜೆ’ ಅನ್ನೋ ರಾಜಕೀಯ ಆಟ ಅಂದೇ ಶುರುವಾಗಿತ್ತು ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.

error: Content is protected !!