ಬಜಪೆ: ದೇವಸ್ಥಾನದ ಕಾಣಿಕೆ ಹುಂಡಿ ಕಳವು ಪ್ರಕರಣ- ʻಮೋಡಸ್ ಆಪರೆಂಡಿʼ ಬಂಧನ

ಬಜಪೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಗಳನ್ನು ಒಡೆದು ಹಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಜಪೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ಅಂತರರಾಜ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಬಂಧಿತ ಆರೋಪಿ.

ಕಳೆದ ಮಾರ್ಚ್ 3ರಂದು ಕೆಂಜಾರು ಗ್ರಾಮದ ಶ್ರೀರಾಮಾಂಜನೇಯ ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು, ದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಸುಮಾರು 25,000 ರೂ. ನಗದನ್ನು ದೋಚಿದ್ದರು. ಈ ಬಗ್ಗೆ ದೇವಸ್ಥಾನದ ವತಿಯಿಂದ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬಜಪೆ ಪೊಲೀಸರು, ಮಾರ್ಚ್ 31ರಂದು ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ಆರೋಪಿ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25)ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೆಂಜಾರು ದೇವಸ್ಥಾನದ ಹುಂಡಿ ಹಣವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕಳವಾಗಿದ್ದ ಕಾಣಿಕೆ ಹುಂಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯು ಕೇವಲ ದೇವಸ್ಥಾನದ ಕಳ್ಳತನ ಮಾತ್ರವಲ್ಲದೆ, ಜಿಲ್ಲೆಯ ಇತರೆಡೆಗಳಲ್ಲೂ ಹಸ್ತಚಳಕ ತೋರಿದ್ದಾನೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ಈತ ಭಾಗಿಯಾಗಿದ್ದನು. ಅಲ್ಲದೆ, ಫೆಬ್ರವರಿ ಕೊನೆಯ ವಾರದಲ್ಲಿ ಪಣಂಬೂರು ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಕಳವು ಮಾಡಿದ ಪ್ರಕರಣದಲ್ಲೂ ಈತನ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ.

ಮೋಡಸ್ ಆಪರೆಂಡಿ:
ಆರೋಪಿಯು ತಮಿಳುನಾಡಿನಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ಕಳ್ಳತನಗಳನ್ನು ಎಸಗಿ, ತಕ್ಷಣವೇ ಮತ್ತೆ ರೈಲಿನ ಮೂಲಕವೇ ತಮಿಳುನಾಡಿಗೆ ಪರಾರಿಯಾಗುವ ಪ್ರವೃತ್ತಿ ಹೊಂದಿದ್ದನು. ಬಜಪೆ ಪೊಲೀಸ್ ನಿರೀಕ್ಷಕರಾದ ಶ್ರೀ ಬಾಲಕೃಷ್ಣ ಮತ್ತು ಕ್ರೈಂ ಸಿಬ್ಬಂದಿ ನೂತನ್, ರಾಜೇಶ್ ಹಾಗೂ ಪ್ರಕಾಶ್ ಅವರ ತಂಡ ಈತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

‘ಮೋಡಸ್ ಆಪರೆಂಡಿ’ ಎಂದರೆ ಒಬ್ಬ ಕಳ್ಳನು ಕಳ್ಳತನ ಮಾಡಲು ಅನುಸರಿಸುವ ವಿಶಿಷ್ಟ ಕಾರ್ಯವಿಧಾನ. ಅಂದರೆ, ಆತ ಮನೆ ಅಥವಾ ದೇವಸ್ಥಾನದ ಒಳಗೆ ನುಗ್ಗುವ ರೀತಿ (ಬಾಗಿಲು ಮುರಿಯುವುದು ಅಥವಾ ಕಿಟಕಿ ಕೊರೆಯುವುದು), ಕಳ್ಳತನಕ್ಕೆ ಆಯ್ದುಕೊಳ್ಳುವ ಸಮಯ, ಬಳಸುವ ಆಯುಧಗಳು ಮತ್ತು ಕೃತ್ಯದ ನಂತರ ತಪ್ಪಿಸಿಕೊಳ್ಳುವ ತಂತ್ರಗಳನ್ನು ಇದು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಕಳ್ಳನಿಗೂ ತನ್ನದೇ ಆದ ಒಂದು ʻಸ್ಟೈಲ್’ ಇರುವುದರಿಂದ, ಪೊಲೀಸರು ಈ ಕೆಲಸದ ಶೈಲಿಯನ್ನು ಆಧರಿಸಿ ಹಳೆಯ ಅಪರಾಧಿಗಳ ಪಟ್ಟಿಯನ್ನು ಪರಿಶೀಲಿಸಿ ಆರೋಪಿಯನ್ನು ಸುಲಭವಾಗಿ ಪತ್ತೆಹಚ್ಚುತ್ತಾರೆ.

error: Content is protected !!