ಮಂಗಳೂರು: ಅಟೋ ಎಲ್‌ಪಿಜಿ ಅಭಾವ; ಗಂಟೆಗಟ್ಟಲೆ ಕ್ಯೂ ನಿಂತ ಆಟೋ ಚಾಲಕರು

ಮಂಗಳೂರು: ಇರಾನ್-ಇಸ್ರೇಲ್-‌ ಅಮೆರಿಕಾದ ನಡುವಿನ ಯುದ್ಧದ ಹೊಡೆತ ಮಂಗಳೂರಿನ ರಿಕ್ಷಾ ಚಾಲಕರಿಗೂ ತಟ್ಟಿದೆ. ಮಂಗಳೂರು ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಅಟೋ ಎಲ್‌ಪಿಜಿ ಖಾಲಿಯಾಗಿರುವುದರಿಂದ ಆಟೋ ರಿಕ್ಷಾ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಪ್ರಮುಖ ಬಂಕ್‌ಗಳಲ್ಲಿ ಇಂಧನ ಲಭ್ಯವಿಲ್ಲದ ಕಾರಣ, ಅನಿಲ ಇರುವ ಬೆರಳೆಣಿಕೆಯ ಬಂಕ್‌ಗಳ ಮುಂದೆ ಆಟೋಗಳ ಸುದೀರ್ಘ ಸಾಲು ಕಂಡುಬರುತ್ತಿದೆ.

ನಗರದ ಬೆಂದೂರ್‌ವೆಲ್ ಸೈಂಟ್ ಆಗ್ನೆಸ್ ಕಾಲೇಜು ಸಮೀಪವಿರುವ ʻಗೋ ಗ್ಯಾಸ್ʼ ಬಂಕ್‌ನಲ್ಲಿ ಅಟೋ ಎಲ್‌ಪಿಜಿ ಲಭ್ಯವಿದ್ದ ಹಿನ್ನೆಲೆಯಲ್ಲಿ, ನೂರಾರು ಆಟೋ ರಿಕ್ಷಾಗಳು ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ತಮ್ಮ ದಿನದ ದುಡಿಮೆಯನ್ನು ಬದಿಗಿಟ್ಟು ಚಾಲಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಗ್ಯಾಸ್ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಆಟೋ ಚಾಲಕರ ದೈನಂದಿನ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

ನಗರದ ಬಹುತೇಕ ಆಟೋಗಳು ಈಗ ಅಟೋ  ಇಂಧನವನ್ನೇ ಅವಲಂಬಿಸಿವೆ. ಆದರೆ, ಕಳೆದ ಕೆಲವು ದಿನಗಳಿಂದ ಬಂಕ್‌ಗಳಿಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಚಾಲಕರು ಕಂಗೆಟ್ಟಿದ್ದಾರೆ. “ಬೆಳಿಗ್ಗೆಯಿಂದಲೇ ಗ್ಯಾಸ್‌ಗಾಗಿ ಅಲೆಯುತ್ತಿದ್ದೇವೆ. ಗಂಟೆಗಟ್ಟಲೆ ಕ್ಯೂ ನಿಂತರೆ ನಮ್ಮ ಬಾಡಿಗೆ ಸಮಯವೆಲ್ಲಾ ಇಲ್ಲೇ ವ್ಯರ್ಥವಾಗುತ್ತಿದೆ” ಎಂದು ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಈ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ನಗರದ ಎಲ್ಲಾ ಬಂಕ್‌ಗಳಲ್ಲಿ ಅನಿಲ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ರಿಕ್ಷಾ ಚಾಲಕರು ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಇಂಧನ ಕಂಪೆನಿಗಳನ್ನು ಒತ್ತಾಯಿಸಿದ್ದಾರೆ. ಇಂಧನ ಅಭಾವ ಹೀಗೆಯೇ ಮುಂದುವರಿದರೆ ನಗರದ ಸಾರಿಗೆ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಆತಂಕ ಎದುರಾಗಿದೆ.

error: Content is protected !!