ಹಾರ್ಮುಜ್ ಜಲಸಂಧಿಯ ʻಕಾವಲುಗಾರ’, ಇರಾನ್ ನೌಕಾಪಡೆ ಮುಖ್ಯಸ್ಥ ತಂಗ್ಸಿರಿ ಕತಂ

ನವದೆಹಲಿ: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಈಗ ಇರಾನ್‌ಗೆ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿದೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾಪಡೆ ʻಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೌಕಾಪದೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಆಯಕಟ್ಟಿನ ಬಂದರು ನಗರಿ ಬಂದರ್ ಅಬ್ಬಾಸ್ ನಲ್ಲಿ ಈ ರಣಬೇಟೆ ನಡೆದಿದೆ ಎನ್ನಲಾಗುತ್ತಿದೆ.

ಹಾರ್ಮುಜ್ ಜಲಸಂಧಿಯ ʻಕಾವಲುಗಾರ’ನ ಅಂತ್ಯ:
ಅಲಿರೆಜಾ ತಂಗ್ಸಿರಿ ಸಾಮಾನ್ಯ ಅಧಿಕಾರಿಯಾಗಿರಲಿಲ್ಲ. ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ ಎನಿಸಿಕೊಂಡಿರುವ ʻಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡುವ ಮತ್ತು ಅಲ್ಲಿ ಇರಾನ್‌ನ ಪಾರುಪತ್ಯ ಮೆರೆಯುವ ಜವಾಬ್ದಾರಿಯನ್ನು ಹೊತ್ತಿದ್ದ ಚತುರ ಸೇನಾ ನಾಯಕ ಈತ. ಇಸ್ರೇಲ್ ಮತ್ತು ಅಮೆರಿಕದ ಸುದೀರ್ಘ ಕಾಲದ ಹಿಟ್ ಲಿಸ್ಟ್ ನಲ್ಲಿದ್ದ ತಂಗ್ಸಿರಿ, ಇದುವರೆಗೆ ಹಲವು ಹತ್ಯೆ ಯತ್ನಗಳಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಆದರೆ ಈ ಬಾರಿ ಅಮೆರಿಕ-ಇಸ್ರೇಲ್ ಅತಿ ಸೂಕ್ಷ್ಮವಾಗಿ ರೂಪಿಸಿದ್ದ ಜಂಟಿ ಕಾರ್ಯಾಚರಣೆಗೆ ಈ ಸಮುದ್ರದ ಹುಲಿ ಬಲಿಯಾಗಿದೆ.

ಕಳೆದ ಫೆಬ್ರವರಿ 28 ರಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸುತ್ತಿವೆ. ಈ ಸಂಘರ್ಷದ ಹಾದಿಯಲ್ಲಿ ಇರಾನ್‌ನ ಸಾಲು ಸಾಲು ಹಿರಿಯ ಅಧಿಕಾರಿಗಳು ಮಣ್ಣು ಮುಕ್ಕುತ್ತಿದ್ದಾರೆ. ತಂಗ್ಸಿರಿ ಸಾವು ಇರಾನ್ ಪಾಲಿಗೆ ಕೇವಲ ವ್ಯಕ್ತಿಯ ಸಾವಲ್ಲ, ಬದಲಾಗಿ ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಅದರ ನೌಕಾ ಬಲಕ್ಕೆ ಬಿದ್ದ ಬಲವಾದ ಏಟು. 1980ರ ದಶಕದ ಇರಾನ್-ಇರಾಕ್ ಯುದ್ಧದಿಂದಲೇ ಪಳಗಿದ್ದ ಈತ, ಇರಾನ್‌ನ ನೌಕಾಪಡೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ತಂಗ್ಸಿರಿ ಹತ್ಯೆಯ ವರದಿಯು ಇರಾನ್ ನಡೆಸುತ್ತಿರುವ ʻಆಪರೇಷನ್ ಟ್ರೂ ಪ್ರಾಮಿಸ್-4′ ಕಾರ್ಯಾಚರಣೆಯ ಬೆನ್ನಲ್ಲೇ ಬಂದಿದೆ. ಇರಾನ್ ಈಗಾಗಲೇ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಸುಮಾರು 82 ಬಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಜ್ಬೊಲ್ಲಾ ಮತ್ತು ಇರಾಕ್‌ನ ಪ್ರತಿರೋಧ ಪಡೆಗಳು ಇರಾನ್ ಪರವಾಗಿ ಅಖಾಡಕ್ಕಿಳಿದಿದ್ದು, ಇಡೀ ಪಶ್ಚಿಮ ಏಷ್ಯಾ ಈಗ ಜ್ವಾಲಾಮುಖಿಯ ಮೇಲೆ ನಿಂತಂತಿದೆ. ಇರಾನ್ ಅಥವಾ ಇಸ್ರೇಲ್ ಈ ಹತ್ಯೆಯ ಬಗ್ಗೆ ಅಧಿಕೃತ ಮುದ್ರೆ ಒತ್ತದಿದ್ದರೂ, ಬಂದರ್ ಅಬ್ಬಾಸ್‌ನಲ್ಲಿ ನಡೆದ ಸ್ಫೋಟದ ತೀವ್ರತೆ ಮಾತ್ರ ಇರಾನ್ ಭದ್ರತಾ ಕೋಟೆಯಲ್ಲಿ ಬಿರುಕು ಮೂಡಿರುವುದನ್ನು ಸಾರುತ್ತಿದೆ.

error: Content is protected !!