ಢಾಕಾ: ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ. ಸುಮಾರು 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ನದಿಗೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.

ಘಟನೆಯ ವಿವರ: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಢಾಕಾದಿಂದ ಪ್ರಯಾಣಿಕರನ್ನು ಕರೆತರುತ್ತಿದ್ದ ಬಸ್, ದೌಲತ್ಡಿಯಾ ಘಾಟ್‌ನಲ್ಲಿ ಸಾರಿಗೆ ಧೋಣಿ (Ferry) ಹತ್ತಲು ಪ್ರಯತ್ನಿಸುತ್ತಿತ್ತು. ಈ ವೇಳೆ ಮತ್ತೊಂದು ಸಣ್ಣ ದೋಣಿ ಪಾಂಟೂನ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಪದ್ಮಾ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದವರ ಪೈಕಿ 11 ಮಂದಿ ಈಜಿ ದಡ ಸೇರಿದ್ದಾರೆ.

ರಕ್ಷಣಾ ಕಾರ್ಯ: ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದ್ದು, ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ‘ಹಮ್ಜಾ’ ಎಂಬ ರಕ್ಷಣಾ ಹಡಗಿನ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಮೃತರಲ್ಲಿ 10 ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
