ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ದ್ವೇಷ ಬಿತ್ತಿದ್ದ ಆರೋಪಿ ಅರೆಸ್ಟ್!

ಮಂಗಳೂರು: ನಗರದಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ ಆರೋಪದ ಮೇಲೆ ಉಡುಪಿ ಮೂಲದ ಯುವಕನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ಬಾಲಕೃಷ್ಣ ಅವರ ಪುತ್ರ ಪವನ್ ಆಚಾರ್ಯ (22) ಬಂಧಿತ ಆರೋಪಿ.

ಘಟನೆಯ ವಿವರ: ಕಳೆದ 2025ನೇ ಸಾಲಿನಲ್ಲಿ ಸುಹಾಸ್ ಶೆಟ್ಟಿ ಕೊಲೆಯಾದ ನಂತರದ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಗುಂಪುಗಳ ನಡುವೆ ದ್ವೇಷ ಬಿತ್ತುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಈ ಕುರಿತು ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 179/2025 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಪೊಲೀಸರ ತನಿಖೆಯ ವೇಳೆ “TN- MADDY” ಎಂಬ ಹೆಸರಿನ ಖಾತೆಯಿಂದ ಈ ಪ್ರಚೋದನಾಕಾರಿ ಸಂದೇಶಗಳನ್ನು ಹರಡುತ್ತಿದ್ದು, ಇದನ್ನು ಪವನ್ ಆಚಾರ್ಯ ನಿರ್ವಹಿಸುತ್ತಿದ್ದನೆಂದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತನ ವಿರುದ್ಧ ಈಗಾಗಲೇ ಉಡುಪಿಯ ಕಾಪು ಪೊಲೀಸ್ ಠಾಣೆಯಲ್ಲೂ (ಅ.ಕ್ರ: 95/2025) ಇದೇ ರೀತಿಯ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

ದಿನಾಂಕ 25-03-2026 ರಂದು ಕಾರ್ಯಾಚರಣೆ ನಡೆಸಿದ ಕಂಕನಾಡಿ ನಗರ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ದಸ್ತಗಿರಿ ಮಾಡಿದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

error: Content is protected !!