ನಿಷೇಧಿತ ಉಗ್ರ ಸಂಘಟನೆಯ ಜೊತೆಗೆ ನಂಟು: ಕರ್ನಾಟಕದ ಓರ್ವ ಸೇರಿ 12 ಮಂದಿ ಬಂಧನ

ಅಮರಾವತಿ: ದೇಶದ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಮತ್ತು ಐಸಿಸ್ (ISIS) ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕರ್ನಾಟಕದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು 12 ಮಂದಿ ಶಂಕಿತರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಮೂವರು ಶಂಕಿತರು ಸೇರಿ ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ ಎಂಬ ಗುಂಪನ್ನು ರಚಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆಯುತ್ತಿದ್ದರು.

ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಆಂಧ್ರ ಪೊಲೀಸರು ಈ ಬೃಹತ್ ಕಾರ್ಯಾಚರಣೆ ನಡೆಸಿ, “ಸಲಾಂ” ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ತಂಡವನ್ನು ಮಟ್ಟಹಾಕಲಾಗಿದೆ.

ಬಂಧಿತ ತಂಡವು ಉಗ್ರ ಒಸಾಮಾ ಬಿನ್ ಲಾಡೆನ್ ರೀತಿಯಲ್ಲೇ ಉಡುಪು ಧರಿಸಿ, ಅವನ ನಡವಳಿಕೆಗಳನ್ನೇ ಅನುಕರಿಸುತ್ತಿದ್ದರು ಎಂದು ವರದಿಯಾಗಿದೆ. ಭಾರತವನ್ನು ‘ಇಸ್ಲಾಮಿಕ್ ರಾಜ್ಯ’ವನ್ನಾಗಿ ಮಾಡುವ ಗುರಿ ಹೊಂದಿದ್ದ ಈ ತಂಡ, ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಯೋಜನೆಯನ್ನೂ ರೂಪಿಸಿತ್ತು. ಈ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇನ್ನೂ ಹಲವರು ಸಿಕ್ಕಿಬೀಳುವ ಸಾಧ್ಯತೆಯಿದೆ.

error: Content is protected !!