ಮೀನಿನ ದರ ಕುಸಿತದ ಸುಳ್ಳು ಸುದ್ದಿ ನಂಬಬೇಡಿ! ಮಾರುಕಟ್ಟೆಯಲ್ಲಿ ನಡೀತಿದೆ ಹಗಲು ದರೋಡೆ!-ಮಂಗಳೂರಿನಲ್ಲಿ ಮೀನು ಮಾಫಿಯಾ ದರ್ಬಾರ್!

ಮಂಗಳೂರು: ನಮ್ಮ ಕರಾವಳಿಯ ಜನರಿಗೆ ಮೀನಿಲ್ಲದೆ ಊಟದ ತಟ್ಟೆ ಪೂರ್ಣವಾಗಲ್ಲ. ಆದರೆ ಈಗ ಮಂಗಳೂರಿನ ಮೀನು ಮಾರುಕಟ್ಟೆಗೆ ಕಾಲಿಟ್ಟರೆ ಸಾಕು, ನಿಮ್ಮ ಕಿಸೆ ಖಾಲಿಯಾಗೋದು ಗ್ಯಾರಂಟಿ! ಸಮುದ್ರದ ದಂಡೆಯಲ್ಲೇ ಇರೋ ನಮಗೆ ಮೀನು ಈಗ ಗಗನಕುಸುಮ. ಇದೆಂಥಾ ವಿಪರ್ಯಾಸ ಅಂದ್ರೆ, ಮೀನು ವಿದೇಶಕ್ಕೆ ರಫ್ತಾಗ್ತಿದ್ದ ಕಾಲದಲ್ಲೂ ಇಷ್ಟೊಂದು ಬೆಲೆ ಇರಲಿಲ್ಲ. ಆದರೆ ಈಗ? ಹಾಗಾದರೆ ಬೆಲೆ ಏರಿಕೆ ಅನ್ನೋದು ಈಗ ʻಮೀನು ಮಾಫಿಯಾʼದ ಕೈಗೊಂಬೆಯಾಗಿದೆಯೇ?

ದರ ನಿಗದಿ ಮಾಡೋ ಧಣಿಗಳು ಯಾರು?
ಮಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಸ್ಟಾಲ್‌ನಿಂದ ಇನ್ನೊಂದು ಸ್ಟಾಲ್‌ಗೆ ಹೋದರೆ ದರಗಳು ಹಗಲು-ರಾತ್ರಿಯಷ್ಟು ವ್ಯತ್ಯಾಸವಿರುತ್ತವೆ. ಈ ಮೀನಿನ ದರ ನಿಗದಿ ಮಾಡೋರು ಯಾರು? ಇದಕ್ಕೆ ಏನಾದ್ರೂ ಒಂದು ಮಾನದಂಡ ಇದೆಯೇ? ಎಂದು ಕೇಳೋರಿಲ್ಲ. ಪ್ರತಿಯೊಬ್ಬ ವ್ಯಾಪಾರಿಯೂ ತನಗೆ ತೋಚಿದಂತೆ, ಬಾಯಿಗೆ ಬಂದಂತೆ ರೇಟ್ ಹೇಳ್ತಿದ್ದಾನೆ. ಇದನ್ನ ಪ್ರಶ್ನಿಸೋ ತಾಕತ್ತು ಗ್ರಾಹಕರಿಗಿಲ್ಲ, ಕೇಳೋ ಸಾಹೇಬರು ಅಧಿಕಾರಿಗಳ ಪಟ್ಟಿಯಲ್ಲಿಲ್ಲ!

ಸೋಶಿಯಲ್ ಮೀಡಿಯಾದಲ್ಲಿ ʻಸುಳ್ಳು ಸುದ್ದಿ’ಯ ಜಾಲ!
ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿ… “ಮೀನಿನ ದರ ಪಾತಾಳಕ್ಕೆ ಕುಸಿತ ಕಂಡಿದೆ, ಮಾರುಕಟ್ಟೆಗೆ ಬನ್ನಿ” ಅಂತ ಯಾರೋ ಕಿರಾತಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂಥ ಸುಳ್ಳು ಸುದ್ದಿಗಳನ್ನು ಹರಡಿಸೋದು ಯಾರು? ಮಾರುಕಟ್ಟೆಗೆ ಬರೋ ಜನರನ್ನ ದಾರಿ ತಪ್ಪಿಸಿ, ಅಲ್ಲಿಗೆ ಬಂದ ಮೇಲೆ ದುಬಾರಿ ದರಕ್ಕೆ ಮೀನು ಮಾರಿ ಜನರನ್ನ ಸುಲಿಗೆ ಮಾಡೋ ಸಂಚು ಇದಾಗಿದೆ. ವಾಸ್ತವದಲ್ಲಿ ಮಾರುಕಟ್ಟೆಯಲ್ಲಿ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಒಂದೇ ಒಂದು ಮೀನೂ ಸಿಗ್ತಿಲ್ಲ ಅನ್ನೋದೇ ಕಹಿ ಸತ್ಯ!

ಕೊಳೆತ ಮೀನು… ಮಾರಾಟ!
ಬೆಲೆ ಜಾಸ್ತಿ ಕೊಟ್ಟರೂ ನಮಗೆ ಸಿಗ್ತಿರೋದು ಸ್ವಚ್ಛ ಮೀನೇ? ಅಥವಾ ರಾಸಾಯನಿಕ ಹಾಕಿ ಫ್ರೀಜರ್‌ನಲ್ಲಿಟ್ಟ ಕೊಳೆತ ಮೀನೇ? ಎನ್ನುವುದನ್ನು ಪರೀಕ್ಷಿಸೋ ವ್ಯವಸ್ಥೆಯೇ ಇಲ್ಲಿಲ್ಲ. ಡೀಪ್ ಫ್ರೀಜರ್‌ನಲ್ಲಿ ದಿನಗಟ್ಟಲೆ ಇಟ್ಟು ಸಾರ್ವಜನಿಕರಿಗೆ ದೊರಕದಂತೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಅಳಿದುಳಿದ ಮೀನುಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಗುಮಾನಿ ಹಬ್ಬಿದೆ.

ಮಂಗಳೂರಿನಲ್ಲೇ ಮೀನು ದುಬಾರಿ!
ಮಜಾ ಏನೆಂದರೆ ಸಮುದ್ರ ಇರೋದು ಮಂಗಳೂರಿನಲ್ಲಿ, ಬಂದರು ಇರೋದು ಇಲ್ಲಿಯೇ. ಆದರೆ ಮಂಗಳೂರಿನಲ್ಲಿ ಮೀನಿನ ಬೆಲೆ ಆಕಾಶ ಮುಟ್ಟಿದೆ. ಅದೇ ನೀವು ಸ್ವಲ್ಪ ಸಿಟಿ ಬಿಟ್ಟು ಹೊರಗೆ ಹೋಗಿ ನೋಡಿ… ಫರಂಗಿಪೇಟೆ, ಬಂಟ್ವಾಳ ದಾಟಿದ್ರೆ ಸಾಕು, ಮಂಗಳೂರಿಗಿಂತ ಕಡಿಮೆ ದರಕ್ಕೆ ಫ್ರೆಶ್ ಮೀನುಗಳು ಸಿಗುತ್ತಿವೆ! ಇದು ಮೀನು ಮಾಫಿಯಾದ ಕರಾಳ ಮುಖ ಎನ್ನಲಾಗುತ್ತಿದೆ. ಮಂಗಳೂರಿನ ಮೀನಿನ ರೇಟ್‌ ಕಂಡು ಮೀನು ವ್ಯಾಪಾರಿಗಳು ಮಂಜೇಶ್ವರ, ಮಲ್ಪೆಯಿಂದ ತಂದು ಕಡಿಮೆ ರೇಟಿಗೆ ಮೀನು ಮಾರುತ್ತಿದ್ದಾರೆ.

ಅಸಲಿಗೆ ಇಲ್ಲಿ ನಡೆಯುತ್ತಿರೋದು ಸಾರ್ವಜನಿಕರ ಹಗಲು ದರೋಡೆ. ಲೈಟ್ ಫಿಶಿಂಗ್‌ನಿಂದ ಮೀನುಗಳ ಲಭ್ಯತೆ ಕಡಿಮೆಯಾಗಿದೆ ಎನ್ನುವುದು ಒಂದು ವಾದವಾದರೆ ಅಸಲಿ ಆಟ ಇರೋದು ಡೀಪ್ ಫ್ರೀಜರ್ ದಂಧೆಕೋರರ ಕೈಯಲ್ಲಿ. ಸಿಕ್ಕ ಮೀನುಗಳನ್ನು ಡೀಫ್‌ ಫ್ರೀಜರ್‌ನಲ್ಲಿಟ್ಟು ಸಂಗ್ರಹಿಸಲಾಗುತ್ತಿದೆ. ಮಳೆಗಾಲದಲ್ಲಿ ಮೀನುಗಾರಿಕೆ ನಿಲ್ಲುವ ಸಮಯದಲ್ಲಿ ಡಬಲ್‌ ರೇಟಿಗೆ ಮೀನು ಮಾರಾಟ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವ ಸಾಧ್ಯತೆ ಇದೆ. ಸಂಬಂಧಪಟ್ಟ ಫುಡ್ ಇನ್ಸ್‌ಪೆಕ್ಟರ್‌ಗಳು ಮತ್ತು ಅಧಿಕಾರಿಗಳು ಈ ಕೂಡಲೇ ಮಾರುಕಟ್ಟೆಗೆ ದಾಳಿ ಮಾಡಿ ಈ ಕೃತಕ ಬೆಲೆ ಏರಿಕೆಯ ಮಾಫಿಯಾವನ್ನು ಬಯಲಿಗೆಳೆಯಬೇಕಿದೆ. ಇಲ್ಲದಿದ್ರೆ ಕರಾವಳಿ ಜನರಿಗೆ ʻಫ್ರೆಶ್ ಮೀನು’ ಅನ್ನೋದು ಬರೀ ಕನಸಾಗೇ ಉಳಿಯುತ್ತದೆ.

error: Content is protected !!