
ಮೂಲ್ಕಿ: ಇದು ಕೇವಲ “ವಾಯ್ಸ್ ಆಫ್ ಪಬ್ಲಿಕ್” ಮಾತ್ರವಲ್ಲ ಜನಸಾಮಾನ್ಯರ ಧ್ವನಿಗೆ ಸಿಕ್ಕ ಜಯ! ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಇಂಡಸ್ಟ್ರಿಯಲ್ ಏರಿಯಾ ಸಮೀಪದ ಅಸಹ್ಯದ ರಾಶಿ ಹಾಗೂ ಪರಿಸರ ನಾಶದ ಬಗ್ಗೆ ʻವಾಯ್ಸ್ ಆಫ್ ಪಬ್ಲಿಕ್’ ಎತ್ತಿದ ಧ್ವನಿಗೆ ಸ್ಪಂದನೆ ಸಿಕ್ಕಿದ್ದು, ಹೆದ್ದಾರಿಯನ್ನು ಪ್ಲಾಸ್ಟಿಕ್ ಪಿಶಾಚಿಗಳಿಂದ ರಕ್ಷಿಸಲಾಗಿದೆ.

ನರಕ ಸದೃಶ ಜಾಗ ಈಗ ಕ್ಲೀನ್ ಅಂಡ್ ನೀಟ್!
ಕೊಲ್ನಾಡು ಹೆದ್ದಾರಿ ಪರಿಸರದಲ್ಲಿ ರಾತ್ರೋರಾತ್ರಿ ಕಳ್ಳರಂತೆ ಬಂದು ಕೋಳಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಕಸ ಸುರಿಯುತ್ತಿದ್ದ ಕಿರಾತಕರ ಬಗ್ಗೆ ʻವಾಯ್ಸ್ ಆಫ್ ಪಬ್ಲಿಕ್’ ಸವಿವರವಾಗಿ ವರದಿ ಮಾಡಿತ್ತು. ಪರಿಸರವಾದಿಗಳ ಬ್ಯಾನರ್ ಕೆಳಗೇ ಕಸ ಸುರಿದು ವ್ಯವಸ್ಥೆಗೆ ಸವಾಲು ಎಸೆಯುತ್ತಿದ್ದ ಆ ಅನಾಮಧೇಯ ಮಾಲೀಕರ ಮುಖವಾಡವನ್ನು ಈ ವರದಿ ಕಳಚಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಮೂಲ್ಕಿ ನಗರ ಪಂಚಾಯತ್, ತಕ್ಷಣವೇ ಜೆಸಿಬಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಆ ನರಕದಂತಿದ್ದ ಜಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಿದೆ.

ನಿಯಮ ಉಲ್ಲಂಘಿಸಿದರೆ ಕಿಸೆ ಖಾಲಿ!
ಬರೀ ಕಸ ತೆರವು ಮಾಡುವುದಷ್ಟೇ ಅಲ್ಲ, ಮತ್ತೆ ಅಲ್ಲಿ ಕಸ ಸುರಿಯುವ ಧೈರ್ಯ ಯಾರಿಗೂ ಬರಬಾರದು ಎಂಬ ನಿಟ್ಟಿನಲ್ಲಿ ಪಂಚಾಯತ್ ಈಗ ಕಠಿಣ ಕ್ರಮ ಕೈಗೊಂಡಿದೆ. ಸ್ಥಳದಲ್ಲಿ ಅಧಿಕೃತ ಬೋರ್ಡ್ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿ ಯಾರಾದರೂ ಅಲ್ಲಿ ಕಸ ಅಥವಾ ತ್ಯಾಜ್ಯ ಸುರಿದರೆ ತಕ್ಷಣವೇ 500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸಾರ್ವಜನಿಕರ ಧ್ವನಿಗೆ ಸಂದ ಜಯ!
ಸಮಾಜದ ಓರೆಕೋರೆಗಳನ್ನು ಎತ್ತಿ ತೋರಿಸಿದಾಗ ವ್ಯವಸ್ಥೆ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಕೊಲ್ನಾಡು ಪ್ರಕರಣವೇ ಸಾಕ್ಷಿ. ʻವಾಯ್ಸ್ ಆಫ್ ಪಬ್ಲಿಕ್’ ಈ ಹಿಂದೆ ಎತ್ತಿದ್ದ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ದಾರಿಯಲ್ಲಿ ಹೋಗುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ದೂರವಾಗಿದೆ. ಆದರೆ ನೆನಪಿಡಿ, ಬೋರ್ಡ್ ಹಾಕಿದ ತಕ್ಷಣ ಕೆಲಸ ಮುಗಿಯಲ್ಲ; ಆ ಸುಂದರ ಕೊಲ್ನಾಡು ಮತ್ತೆ ಕಸದ ತೊಟ್ಟಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು.
ಧ್ವನಿ ನಿಮ್ಮದು, ಬದಲಾವಣೆ ನಮ್ಮದು! ಇದು ‘ವಾಯ್ಸ್ ಆಫ್ ಪಬ್ಲಿಕ್’ ಇಂಪ್ಯಾಕ್ಟ್.

