ಪುತ್ತೂರು: ಮನುಷ್ಯ ಎಷ್ಟೇ ತಂತ್ರಜ್ಞಾನ ಬೆಳೆಸಲಿ, ಪ್ರಕೃತಿಯ ಸೃಷ್ಠಿಯ ಮುಂದೆ ಅದೆಲ್ಲವೂ ಶೂನ್ಯ. ಇದಕ್ಕೆ ಸಾಕ್ಷಿ ಎಂಬಂತೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯಲ್ಲಿ ಒಂದು ಅಪರೂಪದ ಗೆಣಸು ಬೆಳೆದು ನಿಂತಿದೆ. ಬರಹಗಾರ, ನಿರ್ದೇಶಕ ಕುಮಾರ್ ಪೆರ್ನಾಜೆ ಅವರ ಕೈತೋಟದಲ್ಲಿ ಬೆಳೆದಿರುವ ಈ ಗೆಣಸು, ನೋಡುಗರಿಗೆ ಸೋಜಿಗ ಮೂಡಿಸುತ್ತಿದೆ.

ಗೆಣಸೋ ಅಥವಾ ಗದೆಯೋ?
ಸಾಮಾನ್ಯವಾಗಿ ಗೆಣಸು ಅಂದ ಕೂಡಲೇ ಚಿಕ್ಕ ಗಾತ್ರದ ಗಡ್ಡೆಗಳು ನೆನಪಾಗುತ್ತವೆ. ಆದರೆ ಪೆರ್ನಾಜೆಯವರ ತೋಟದಲ್ಲಿ ಬೆಳೆದಿರುವ ಈ ಬಿಳಿ ಗೆಣಸು ಮಾತ್ರ ಅಕ್ಷರಶಃ ‘ಗದೆಯ’ ಆಕಾರದಲ್ಲಿದೆ. ಒಂದುವರೆ ಕೆಜಿ ತೂಕದ ಈ ಗೆಣಸು ಬಾಟಲಿಯಂತೆ ಕಂಡರೆ, ಮತ್ತೊಂದು ಒಂದು ಕೆಜಿ ತೂಕದ ತೆಂಗಿನಕಾಯಿಯ ಗಾತ್ರದಲ್ಲಿ ಬೆಳೆದು ನಿಂತಿದೆ! ಈ ಹಿಂದೆ ಇದೇ ತೋಟದಲ್ಲಿ ಬಾತುಕೋಳಿಯ ಆಕಾರದ ಗೆಣಸು ಕೂಡ ಮೂಡಿಬಂದಿತ್ತು ಎಂಬುದು ವಿಶೇಷ.

ಯುಗಾದಿಯ ಹೊಸ ಬೆಳಕು
ಕಾಡುಪ್ರಾಣಿಗಳ ಉಪಟಳದ ನಡುವೆಯೂ ಹಿತ್ತಲ ಕೃಷಿಯನ್ನು ಉಳಿಸಿಕೊಂಡಿರುವ ಕುಮಾರ್ ಪೆರ್ನಾಜೆ ಅವರಿಗೆ ಈ ಬೆಳೆ ಯುಗಾದಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ದ.ರಾ. ಬೇಂದ್ರೆಯವರ “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ” ಎಂಬ ಸಾಲುಗಳಂತೆ, ಹೊಸ ವರುಷಕ್ಕೆ ಹೊಸ ಹರುಷವನ್ನು ಈ ಪ್ರಕೃತಿಯ ಚಿಗುರು ಹೊತ್ತು ತಂದಿದೆ. ಪರಾಭವ ಸಂವತ್ಸರವನ್ನು ಬರಮಾಡಿಕೊಳ್ಳುವ ಹೊತ್ತಿನಲ್ಲಿ ಈ ಕೃಷಿ ಸಾಧನೆ ಮನಸ್ಸಿಗೆ ನೆಮ್ಮದಿ ನೀಡಿದೆ.

“ಬಯಕೆ ಕಡಿಮೆಯಾದಷ್ಟು ಬದುಕು ಸರಳವಾಗುತ್ತದೆ, ಸರಳವಾದಷ್ಟು ಮನಸ್ಸು ಶುದ್ಧವಾಗುತ್ತದೆ” ಎನ್ನುವ ಕುಮಾರ್ ಪೆರ್ನಾಜೆ ಅವರು, ಕೃಷಿಯನ್ನು ಕೇವಲ ಉದ್ಯೋಗವಾಗಿ ನೋಡದೆ ಒಂದು ತಪಸ್ಸಿನಂತೆ ಕಂಡಿದ್ದಾರೆ. “ಯಶಸ್ಸು ಸುಮ್ಮನೆ ಬರುವುದಿಲ್ಲ, ಎಲ್ಲಿ ಅವಮಾನವಿದೆಯೋ ಅಲ್ಲೇ ಸನ್ಮಾನವೂ ಇರುತ್ತದೆ” ಎಂಬ ಅವರ ಮಾತುಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆ. ಹಿರಿಯರ ಅಂಬೋಣದಂತೆ ಸಾಧನೆ ಮತ್ತು ಆದರ್ಶದ ಬದುಕು ನಡೆಸುತ್ತಿರುವ ಪೆರ್ನಾಜೆಯವರ ಈ ʻಗೆಣಸಿನ ವಿಸ್ಮಯ’ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
