ಕುಂದಾಪುರ: ಗಾರೆ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ವಿಧಿಯಾಟಕ್ಕೆ ಬಲಿಯಾದ ಘಟನೆ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಶಿವರಾಜ್ (35) ಮೃತಪಟ್ಟ ದುರ್ದೈವಿ. ಕಳೆದ 15 ವರ್ಷಗಳಿಂದ ಗಾರೆ ವೃತ್ತಿಯನ್ನೇ ನಂಬಿಕೊಂಡಿದ್ದ ಶಿವರಾಜ್, ಕೆಲಸದ ವೇಳೆಯೇ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಮರುಕ ಉಂಟುಮಾಡಿದೆ.

ನಡೆದಿದ್ದೇನು?
ಕಡ್ಗಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎಂಬುವವರ ಮನೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು. ಸೋಮವಾರ ಮಧ್ಯಾಹ್ನ ಶಿವರಾಜ್ ಮತ್ತು ಇತರ ಇಬ್ಬರು ಕೆಲಸಗಾರರು ಕಬ್ಬಿಣದ ಏಣಿಯನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಮನೆಯ ಹಿಂಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ತಕ್ಷಣವೇ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದ ಶಿವರಾಜ್ ಸ್ಥಳದಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಶಿವರಾಜ್ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅದೃಷ್ಟವಶಾತ್ ಏಣಿ ಹಿಡಿದಿದ್ದ ಉಳಿದ ಇಬ್ಬರು ಕೆಲಸಗಾರರು ಅಪಾಯದಿಂದ ಪಾರಾಗಿದ್ದಾರೆ.

ಮೃತ ಶಿವರಾಜ್ ಅವಿವಾಹಿತರಾಗಿದ್ದು, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. 15 ವರ್ಷಗಳಿಂದ ಗಾರೆ ಕೆಲಸದಲ್ಲಿ ಅನುಭವ ಹೊಂದಿದ್ದರೂ, ಒಂದು ಕ್ಷಣದ ಅಚಾತುರ್ಯ ಅವರ ಪ್ರಾಣವನ್ನೇ ಬಲಿಪಡೆದಿದೆ. ಘಟನಾ ಸ್ಥಳಕ್ಕೆ ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
