ಪ್ಯಾನಿಕ್ ಎಂಬ ʻಡಮ್ಮಿ’ ಬಟನ್!!! ಪ್ರಯಾಣಿಕರಿಗೆ ಗೊತ್ತೇ ಇಲ್ಲ, ಒತ್ತಿದ್ರೂ ಮೆಸೇಜ್ ಹೋಗಲ್ಲ!- ಸರಿಪಡಿಸದಿದ್ರೆ ಹೋರಾಟ!

ಮಂಗಳೂರು: ಪ್ರವಾಸಿ ವಾಹನಗಳಲ್ಲಿ ‘ಪ್ಯಾನಿಕ್ ಬಟನ್’ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶದ ಹಿಂದೆ ಭಾರಿ ಅವ್ಯವಹಾರ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆನಂದ ಕೆ., ಈ ಸಾಧನವು ತಾಂತ್ರಿಕವಾಗಿ ವಿಫಲವಾಗಿದ್ದು, ಕೇವಲ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ. ಈ ಅವೈಜ್ಞಾನಿಕತೆಯನ್ನು ನಿಲ್ಲಿಸದೇ ಇದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನೆರೆಯ ಕೇರಳ ರಾಜ್ಯದಲ್ಲಿ ಜಿಎಸ್‌ಟಿ ಸೇರಿದಂತೆ ಸುಮಾರು 4,000 ರೂಪಾಯಿಗೆ ಸಿಗುವ ಪ್ಯಾನಿಕ್ ಬಟನ್ ಸಾಧನಕ್ಕೆ ಕರ್ನಾಟಕದಲ್ಲಿ ಅಕ್ರಮವಾಗಿ 13,500 ರಿಂದ 16,000 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆಯು ಉಚ್ಚ ನ್ಯಾಯಾಲಯಕ್ಕೆ ಈ ಸಾಧನದ ಬೆಲೆ 8,250 ರೂಪಾಯಿ ಎಂದು ಮಾಹಿತಿ ನೀಡಿದ್ದರೂ, ವಾಸ್ತವದಲ್ಲಿ ಖಾಸಗಿ ಕಂಪನಿಗಳು ದುಪ್ಪಟ್ಟು ಹಣ ಪಡೆಯುತ್ತಿವೆ. ಅಚ್ಚರಿಯ ವಿಷಯವೆಂದರೆ, ಇಷ್ಟು ದೊಡ್ಡ ಮೊತ್ತ ಪಡೆದರೂ ಕಂಪನಿಗಳು ಚಾಲಕರಿಗೆ ಯಾವುದೇ ಅಧಿಕೃತ ಬಿಲ್ ನೀಡಲು ನಿರಾಕರಿಸುತ್ತಿವೆ ಎಂದು ಅವರು ದೂರಿದರು.

ಪ್ರಯಾಣಿಕರ ಸುರಕ್ಷತೆಗಾಗಿ ಈ ಬಟನ್ ಒತ್ತಿದರೆ ಅದು ಕಂಟ್ರೋಲ್ ರೂಮ್‌ಗೆ ಸಂದೇಶ ರವಾನಿಸಬೇಕು. ಆದರೆ ಪ್ರಸ್ತುತ ಅಳವಡಿಸಲಾಗಿರುವ ಸಾಧನಗಳು ʻಡಮ್ಮಿ’ಯಾಗಿದ್ದು, ಬಟನ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ನೆರವು ನೀಡಬೇಕಾದ ಇಆರ್‌ಎಸ್ (ERS) ವ್ಯವಸ್ಥೆಯೂ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಇದರಿಂದ ಯಾವುದೇ ಲಾಭವಿಲ್ಲ. ಬಟನ್ ಒತ್ತಿದ ಒಂದು ವಾರದ ನಂತರವೂ ಚಾಲಕರಿಗೆ ಯಾವುದೇ ಕರೆಗಳು ಬರುತ್ತಿಲ್ಲ, ಬಂದರೂ ಅದು ಪ್ರಯಾಣಿಕರಿಗೆ ತಲುಪುತ್ತಿಲ್ಲ. ಪ್ರಯಾಣಿಕರಿಗೂ ಇಂಥದೊಂದು ಬಟನ್‌ ಇದೆ ಎಂಬ ಮಾಹಿತಿಯೂ ಇಲ್ಲ ಎಂದು ಆನಂದ್‌ ಆರೋಪಿಸಿದರು.

ಈಗಾಗಲೇ ಸಾಲ ಮಾಡಿ ಪ್ಯಾನಿಕ್ ಬಟನ್ ಅಳವಡಿಸಿಕೊಂಡಿರುವ ಚಾಲಕರಿಗೆ ಈಗ ವಾರ್ಷಿಕ ರಿಚಾರ್ಜ್ ಹೆಸರಿನಲ್ಲಿ ಕಂಪನಿಗಳು ಕಿರುಕುಳ ನೀಡುತ್ತಿವೆ. ಸರ್ಕಾರ ನಿಗದಿಪಡಿಸಿದ 1,800 ರೂಪಾಯಿ ಬದಲಿಗೆ 3,800 ರೂಪಾಯಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ರಿಚಾರ್ಜ್ ಮಾಡದ ವಾಹನಗಳ ಎಫ್‌ಸಿ (FC) ಅನ್ನು ಆರ್‌ಟಿಒ ಅಧಿಕಾರಿಗಳು ತಡೆಹಿಡಿಯುತ್ತಿರುವುದು ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ. ನಿರ್ಭಯಾ ಪ್ರಕರಣ ನಡೆದಿದ್ದು ಬಸ್ಸಿನಲ್ಲಿ ಆಗಿದ್ದರೂ, ಅದನ್ನು ಕೇವಲ ಟ್ಯಾಕ್ಸಿ ಮತ್ತು ಕ್ಯಾಬ್‌ಗಳಿಗೆ ಸೀಮಿತಗೊಳಿಸಿರುವುದು ವಿರೋಧಾಭಾಸ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಗ್ಗೆ ಅಧಿವೇಶನದಲ್ಲಿ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಹಾಗೂ ಎಂಎಲ್‌ಸಿ ಐವನ್‌ ಡಿಸೋಜಾ ಧ್ವನಿ ಎತ್ತಿದ್ದರೂ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಅವೈಜ್ಞಾನಿಕ ಪದ್ಧತಿಯನ್ನು ಕೂಡಲೇ ನಿಲ್ಲಿಸದಿದ್ದರೆ ಮಂಗಳೂರು ಮತ್ತು ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘ ಎಚ್ಚರಿಸಿದೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಹರೀಶ್ ಶೆಟ್ಟಿ ಕುತ್ತಾರ್, ಕಾರ್ಯದರ್ಶಿ ರಾಜೇಶ್, ನಾಗೇಶ್ ಮಿತ್ತಡ್ಕ, ಖಜಾಂಜಿ ಸುರೇಶ್ ಸಲ್ಯಾನ್ ಮಾಜಿ ಪದಾಧಿಕಾರಿ ಶುಭಕರ ಶೆಟ್ಟಿ ಹಾಗೂ ಉದಯ ಕುಮಾರ್ ಉಪಸ್ಥಿತರಿದ್ದರು.

error: Content is protected !!