ಮದ್ದೂರು: ಸಕ್ಕರೆ ನಾಡು ಮದ್ದೂರಿನಲ್ಲಿ ಸೋಮವಾರ ನಡೆದ ʻಬಲಿದಾನ್ ದಿವಸ್’ ಕಾರ್ಯಕ್ರಮ ಕೇವಲ ಸ್ಮರಣೆಯಾಗಿ ಉಳಿಯಲಿಲ್ಲ; ಅದು ರಾಜಕೀಯ ಕಿಡಿ ಹೊತ್ತಿಸುವ ವೇದಿಕೆಯಾಯಿತು. ಸದಾ ತಮ್ಮ ನೇರ ನುಡಿ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಲ್ಲಿ ಮತ್ತೊಮ್ಮೆ ಗುಡುಗಿದ್ದಾರೆ.

ವೇದಿಕೆಯ ಮೇಲೆ ಮೈಕ್ ಹಿಡಿಯುತ್ತಿದ್ದಂತೆ ಯತ್ನಾಳ್ ಅವರ ಆಕ್ರೋಶದ ಅಲೆ ಶುರುವಾಯಿತು. “2028ಕ್ಕೆ ರಾಜ್ಯದಲ್ಲಿ ಅಪ್ಪಟ ಹಿಂದೂ ಸರ್ಕಾರ ಬರಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪೊಲೀಸರ ಕೈಗೆ ಲಾಠಿ ಬದಲು ಎಕೆ-47 ಕೊಡುತ್ತೇವೆ. ಯಾರಾದರೂ ‘ಪಾಕಿಸ್ತಾನ್ ಜಿಂದಾಬಾದ್’ ಅಂತ ಘೋಷಣೆ ಕೂಗಿದರೆ, ಅವರ ಬಾಯಿಗೇ ನೇರವಾಗಿ ಗುಂಡು ಹೊಡೆಸುತ್ತೇವೆ,” ಎಂದು ಗುಡುಗಿದರು. ಅವರ ಈ ಮಾತುಗಳಿಗೆ ಮದ್ದೂರಿನ ಹಳೆ ಬಸ್ ಸ್ಟ್ಯಾಂಡ್ ಪರಿಸರದಲ್ಲಿ ನೆರೆದಿದ್ದ ಯುವ ಸಮೂಹದಿಂದ ಭಾರಿ ಜೈಕಾರ ಕೇಳಿಬಂತು.
ಉತ್ತರ ಪ್ರದೇಶದ ಮಾದರಿಯನ್ನು ಪ್ರಸ್ತಾಪಿಸಿದ ಯತ್ನಾಳ್, “ಗಣಪತಿ ಉತ್ಸವ ಅಥವಾ ಹಿಂದೂ ಹಬ್ಬಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸುತ್ತೇವೆ. ಅಷ್ಟೇ ಅಲ್ಲ, ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾಗಿರುವ ಎಲ್ಲಾ ಕೇಸುಗಳನ್ನು ಒಂದೇ ಪೆನ್ನಿನ ಏಟಿಗೆ ರದ್ದು ಮಾಡುತ್ತೇವೆ,” ಎಂದು ಭರವಸೆ ನೀಡಿದರು. ಮದ್ದೂರಿನಿಂದ ಶುರುವಾದ ಈ ‘ಕ್ರಾಂತಿ’ ಬಸವಕಲ್ಯಾಣದವರೆಗೆ ತಲುಪಲಿದೆ ಎಂಬುದು ಅವರ ಭವಿಷ್ಯವಾಣಿ.
ಅನಂತಕುಮಾರ್ ಹೆಗಡೆ ಮಾರ್ಮಿಕ ಮಾತು
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೂಡ ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು. “ಜಾತ್ಯತೀತ (Secular) ಎಂದು ಹೇಳಿಕೊಳ್ಳುವವರಿಗೆ ತಮ್ಮ ಅಸ್ತಿತ್ವದ ಬಗ್ಗೆಯೇ ಅರಿವಿಲ್ಲ. ನಮಗೆ ಅಪ್ಪ-ಅಮ್ಮನ ಪರಿಚಯವಿದೆ, ಹಾಗಾಗಿ ನಾವು ಜಾತ್ಯತೀತರಿಲ್ಲ, ಧರ್ಮನಿಷ್ಠರು. ನಮ್ಮಲ್ಲಿ ಹರಿಯುತ್ತಿರುವುದು ವೀರ ರಕ್ತ,” ಎನ್ನುವ ಮೂಲಕ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.
ಯತ್ನಾಳ್ ಅವರ ಈ ಆರ್ಭಟಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಯತ್ನಾಳ್ ಅವರು ಚಟಕ್ಕೆ, ಚಪಲಕ್ಕೆ ಇಂತಹ ಮಾತುಗಳನ್ನು ಆಡುತ್ತಾರೆ. ಇಂತಹ ಮೂರ್ಖರ ಹೇಳಿಕೆಗಳಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ,” ಎಂದು ಲೇವಡಿ ಮಾಡಿದ್ದಾರೆ. ಪಕ್ಷದ ಒಳಗಿನ ಈ ʻಶೀತಲ ಸಮರ’ ಮದ್ದೂರಿನ ಬಲಿದಾನ್ ದಿವಸದ ನಂತರ ಮತ್ತಷ್ಟು ಕಾವೇರುವ ಲಕ್ಷಣಗಳು ಕಾಣುತ್ತಿವೆ.