ಹೋಟೆಲ್ ಮಾಲೀಕರಿಗೆ ಒಂದು ವಾರ ಗಡುವು: ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ‘ಗೇಲ್’ ನೋಂದಣಿ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ತಲೆದೂರಿರುವ ವಾಣಿಜ್ಯ ಸಿಲಿಂಡರ್‌ಗಳ ಅಭಾವವನ್ನು ನೀಗಿಸಲು ಮತ್ತು ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಎಲ್ಲಾ ವಾಣಿಜ್ಯ ಬಳಕೆದಾರರು ಅದರಲ್ಲೂ ಮುಖ್ಯವಾಗಿ ಹೋಟೆಲ್ ಮಾಲೀಕರು ಒಂದು ವಾರದೊಳಗೆ ಗೇಲ್ (GAIL) ಕಂಪೆನಿಯೊಂದಿಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೇಂದ್ರದಿಂದ 20% ಹೆಚ್ಚುವರಿ ಪೂರೈಕೆ:
ರಾಜ್ಯದಲ್ಲಿ ಸದ್ಯಕ್ಕೆ ದಿನಕ್ಕೆ ಸುಮಾರು 15,000 ರಿಂದ 16,000 ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ. ಈ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿಯಾಗಿ ಶೇ. 20ರಷ್ಟು ಸಿಲಿಂಡರ್‌ಗಳನ್ನು ಪೂರೈಸಲು ಒಪ್ಪಿಗೆ ನೀಡಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ IOC, HP, GAIL ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳ ಉನ್ನತ ಅಧಿಕಾರಿಗಳು ಭಾಗವಹಿಸಿ ಪೂರೈಕೆ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.

ನೋಂದಣಿ ಕಡ್ಡಾಯ ಮತ್ತು ಅಕ್ರಮ ತಡೆ:
ವಾಣಿಜ್ಯ ಸಿಲಿಂಡರ್‌ಗಳು ಅಧಿಕೃತವಲ್ಲದ ಮಾರುಕಟ್ಟೆಗೆ ಅಥವಾ ಬ್ಲಾಕ್ ಮಾರ್ಕೆಟ್‌ಗೆ ಹೋಗುವುದನ್ನು ತಡೆಯಲು ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಹೋಟೆಲ್ ಮತ್ತು ವಾಣಿಜ್ಯ ಘಟಕಗಳು ಒಂದು ವಾರದೊಳಗೆ ಗೇಲ್ ಕಂಪೆನಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಸಿಲಿಂಡರ್ ವಿತರಣೆ ಮಾಡುವುದು ಕಷ್ಟವಾಗಲಿದೆ ಎಂದು ಸಚಿವರು ಎಚ್ಚರಿಸಿದ್ದಾರೆ.

ದೂರದೃಷ್ಟಿಯ ಯೋಜನೆ:
ಈ ನೋಂದಣಿ ಪ್ರಕ್ರಿಯೆಯಿಂದ ಕಪ್ಪು ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ GAIL ಪೈಪ್‌ಲೈನ್ ಮೂಲಕ ಹೆಚ್ಚಿನ ಅನಿಲ ಪೂರೈಕೆಗೆ ಅಗತ್ಯವಿರುವ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸರ್ಕಾರಕ್ಕೆ ಸಹಕಾರಿಯಾಗಲಿದೆ. ಹೋಟೆಲ್ ಉದ್ಯಮಕ್ಕೆ ನಿರಂತರ ಇಂಧನ ಪೂರೈಕೆ ಖಚಿತಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

error: Content is protected !!