ನವದೆಹಲಿ: ಮಧ್ಯಪ್ರಾಚ್ಯದ ರಣಾಂಗಣ ಈಗ ದಿಕ್ಕನ್ನೇ ಬದಲಿಸಿದೆ. ಇರಾನ್ ತನ್ನ ಕ್ಷಿಪಣಿ ದಾಳಿಯ ವ್ಯಾಪ್ತಿಯನ್ನು ಅನಿರೀಕ್ಷಿತವಾಗಿ ವಿಸ್ತರಿಸಿದ್ದು, ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ ಮತ್ತು ಬ್ರಿಟನ್‌ನ ಅತ್ಯಂತ ಸುರಕ್ಷಿತ ಹಾಗೂ ಆಯಕಟ್ಟಿನ ಮಿಲಿಟರಿ ತಾಣ ‘ಡಿಯಾಗೋ ಗಾರ್ಸಿಯಾ’ (Diego Garcia) ಮೇಲೆ ಎರಡು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಈ ದಾಳಿಯು ಕೇವಲ ಗುರಿಯನ್ನು ತಲುಪುವ ಪ್ರಯತ್ನವಾಗಿರದೆ, ಅಮೆರಿಕದ ಅತಿ ದೊಡ್ಡ ಸೈನಿಕ ನೆಲೆಗಳು ಕೂಡ ನಮ್ಮ ವ್ಯಾಪ್ತಿಯಿಂದ ದೂರವಿಲ್ಲ ಎಂಬ ಬಲವಾದ ಎಚ್ಚರಿಕೆಯಾಗಿದೆ.
ಈ ದಾಳಿಯು ಜಾಗತಿಕ ರಕ್ಷಣಾ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಲು ಮುಖ್ಯ ಕಾರಣ ಇರಾನ್‌ನ ಈವರೆಗಿನ ಘೋಷಿತ ಸಾಮರ್ಥ್ಯ. ಇರಾನ್ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಿತಿ 2,000 ಕಿ.ಮೀ ಎಂದು ಈವರೆಗೆ ವಿಶ್ವದ ಮುಂದೆ ಹೇಳಿಕೊಂಡಿತ್ತು. ಆದರೆ, ಇರಾನ್ ತೀರದಿಂದ ಸುಮಾರು 4,000 ಕಿ.ಮೀ ದೂರದಲ್ಲಿರುವ ಡಿಯಾಗೋ ಗಾರ್ಸಿಯಾವನ್ನು ಗುರಿಯಾಗಿಸಿರುವುದು ಇಡೀ ಲೆಕ್ಕಾಚಾರವನ್ನೇ ಬದಲಿಸಿದೆ. ಇರಾನ್ ಜಗತ್ತಿಗೆ ತಿಳಿಯದಂತೆ ದ್ವಿಗುಣ ಶಕ್ತಿಯ ಕ್ಷಿಪಣಿಗಳನ್ನು ಸಿದ್ಧಪಡಿಸಿಕೊಂಡಿದೆಯೇ ಎಂಬ ಆತಂಕ ಈಗ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳನ್ನು ಕಾಡತೊಡಗಿದೆ.

ಡಿಯಾಗೋ ಗಾರ್ಸಿಯಾ ದ್ವೀಪವು ಅಮೆರಿಕದ ಪಾಲಿಗೆ ಹಿಂದೂ ಮಹಾಸಾಗರದ ಅತ್ಯಂತ ಬೆಲೆಬಾಳುವ ಆಸ್ತಿ. ಇಲ್ಲಿಂದಲೇ ಅಮೆರಿಕದ ಭಾರೀ ಬಿ-52 ಬಾಂಬರ್ ವಿಮಾನಗಳು ಹಾರಾಟ ನಡೆಸುತ್ತವೆ ಮತ್ತು ಜಗತ್ತಿನ ಮೇಲೆ ಕಣ್ಗಾವಲು ಇರಿಸುತ್ತವೆ.

ಇಂತಹ ಭದ್ರಕೋಟೆಯ ಮೇಲೆ ದಾಳಿಗೆ ಮುಂದಾಗಿರುವ ಇರಾನ್, ಮಧ್ಯಪ್ರಾಚ್ಯದ ಸಂಘರ್ಷವನ್ನು ಹೊಸ ರಂಗಕ್ಕೆ ತಂದಿದೆ. ವರದಿಗಳ ಪ್ರಕಾರ, ಅಮೆರಿಕವು ಈ ಕ್ಷಿಪಣಿಯನ್ನು ತಡೆಯಲು ತನ್ನ ಅತ್ಯಾಧುನಿಕ SM-3 ಇಂಟರ್‌ಸೆಪ್ಟರ್ ಅನ್ನು ಬಳಸಿದೆ. ಕ್ಷಿಪಣಿ ಗುರಿ ತಲುಪುವಲ್ಲಿ ವಿಫಲವಾಗಿದ್ದರೂ, ಅಮೆರಿಕ ತನ್ನ ದುಬಾರಿ ರಕ್ಷಣಾ ವ್ಯವಸ್ಥೆಯನ್ನು ಬಳಸುವಂತೆ ಮಾಡುವಲ್ಲಿ ಇರಾನ್ ರಾಜತಾಂತ್ರಿಕ ಜಯ ಸಾಧಿಸಿದೆ.

ಇರಾನ್‌ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ಮೆಹರ್’ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇದು ಶತ್ರುಗಳು ಕಲ್ಪಿಸಿಕೊಳ್ಳದ ಶಕ್ತಿಯನ್ನು ಇರಾನ್ ಹೊಂದಿದೆ ಎಂಬುದಕ್ಕೆ ಸಾಕ್ಷಿ” ಎಂದು ಬಣ್ಣಿಸಿದೆ. ಈ ಬೆಳವಣಿಗೆಯಿಂದಾಗಿ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳು ತಮ್ಮ ಕ್ಷಿಪಣಿ ರಕ್ಷಣಾ ಕವಚಗಳನ್ನು ಪುನರ್ ಪರಿಶೀಲಿಸುವಂತಾಗಿದೆ. ಇರಾನ್‌ನ ಕ್ಷಿಪಣಿಗಳು ಈಗ ದಕ್ಷಿಣ ಯುರೋಪ್ ಮತ್ತು ಇಡೀ ಹಿಂದೂ ಮಹಾಸಾಗರ ಪ್ರದೇಶಕ್ಕೆ ಬೆದರಿಕೆಯಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರ ಇನ್ನಷ್ಟು ಸ್ಫೋಟಕ ರೂಪ ಪಡೆಯುವ ಲಕ್ಷಣಗಳು ದಟ್ಟವಾಗಿವೆ.