ಧಾರವಾಡ: ಆಸ್ತಿ ಕಲಹದಿಂದ ಯುಗಾದಿ ಹಬ್ಬದ ದಿನವೇ ಹೊಲಕ್ಕೆ ಪೂಜೆ ಮಾಡಲು ಮುಂದಾದ ತಂಗಿಯನ್ನು ಒಡಹುಟ್ಟಿದ ಅಣ್ಣನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ತಡಕೋಡ ಗ್ರಾಮದ ಅಮ್ಮಿನಬಾವಿ ನಿವಾಸಿ ಶಿವಲೀಲಾ ಈಶ್ವರ ಸಂಗೊಳ್ಳಿ ಹತ್ಯೆಗೀಡಾದ ಮಹಿಳೆ. ಹನುಮಂತ ಯಲಿವಾಳ ಬಂಧಿತ ಆರೋಪಿ.

ಶಿವಲೀಲಾ ಅವರನ್ನು ತಡಕೋಡ ಗ್ರಾಮದ ಈಶ್ವರ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಶಿವಲೀಲಾ ತನ್ನ ಗಂಡನೊಂದಿಗೆ ಜಗಳವಾಡಿ ತಾಯಿ ಮನೆಗೆ ಬಂದು ವಾಸವಾಗಿದ್ದಳು. ಇದೇ ವೇಳೆ ಆಸ್ತಿ ವಿಚಾರವಾಗಿ ಅಣ್ಣ ಹಾಗೂ ತಂಗಿ ನಡುವೆ ಆಗಾಗ ಮನಸ್ತಾಪ ಆಗುತ್ತಲೇ ಇತ್ತು. ಯುಗಾದಿ ಹಬ್ಬದ ಪ್ರಯುಕ್ತ ಶಿವಲೀಲಾ ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಪೂಜೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಅಣ್ಣ-ತಂಗಿ ಮಧ್ಯೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಅಣ್ಣ ಹನುಮಂತ ತಂಗಿಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.


ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಹನುಮಂತ ಯಲಿವಾಳ ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.