2027 ರ ಏಕದಿನ ವಿಶ್ವಕಪ್ ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ

2024 ರಲ್ಲಿ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದ ಭಾರತ, 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ 2026 ರಲ್ಲಿ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಇನ್ನು ಮುಂದಿನ ವರ್ಷ ಅಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಅದರ ತಯಾರಿ ಬಿಸಿಸಿಐ ಈಗಿನಿಂದಲೇ ನಡೆಸುತ್ತಿದೆ. ಈ ಪಂದ್ಯಾವಳಿಗೆ ಬಿಸಿಸಿಐ, 20 ಆಟಗಾರರ ಪಟ್ಟಿಯನನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.

ಏಕದಿನ ವಿಶ್ವಕಪ್ 2027 ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಆತಿಥ್ಯದಲ್ಲಿ ನಡೆಯಲಿದೆ. ಹೀಗಾಗಿ 2023 ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಸೋತು ಟ್ರೋಫಿಯಿಂದ ವಂಚಿತವಾಗಿದ್ದ ಟೀಂ ಇಂಡಿಯಾ ಈ ಬಾರಿ ಶತಾಯಗತಾಯ ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿದೆ. ಹೀಗಾಗಿ ಈ ವರ್ಷ ಉಳಿದೆರಡು ಮಾದರಿಗಳಿಗಿಂತ ಏಕದಿನ ಮಾದರಿಯ ಮೇಲೆ ಬಿಸಿಸಿಐ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಏಕದಿನ ಸರಣಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ಲಾನ್ ರೂಪಿಸಿದೆ.


ಬಿಸಿಸಿಐ ಈಗಾಗಲೇ, ಮುಂಬರುವ ಏಕದಿನ ವಿಶ್ವಕಪ್​ಗೆ 20 ಆಟಗಾರರ ತಂಡವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಇದರರ್ಥ, ಆಯ್ಕೆದಾರರು ಈಗಾಗಲೇ ಆಯ್ಕೆ ಮಾಡಿರುವ 20 ಆಟಗಾರರ ಮೇಲೆ ಮಾತ್ರ ಕಣ್ಣಿಡಲಿದ್ದಾರೆ. ಈ 20 ಆಟಗಾರರು ಆಡುವ ಐಪಿಎಲ್ ಆಗಲಿ, ಟಿ20 ಆಗಲಿ ಅಥವಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಾಗಲಿ ಅವುಗಳು ನಡೆಯುವ ಸಮಯದಲ್ಲಿ ಆಯ್ಕೆ ಮಂಡಳಿಯ ಸದಸ್ಯರು ಅಲ್ಲಿ ಹಾಜರಿದ್ದು, ಆ ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದ್ದು, ಈ ಲೀಗ್​ ನಡೆಯುವ ಸಮಯದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಸದಸ್ಯರಾದ ಎಸ್ಎಸ್ ದಾಸ್, ಆರ್ ಪಿ ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ಈ 20 ಆಟಗಾರರನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ 20 ಆಟಗಾರರ ಪಂದ್ಯಗಳ ಸಮಯದಲ್ಲಿ ಈ ಆಯ್ಕೆದಾರರು ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ. ಕ್ರೀಡಾಂಗಣದಲ್ಲಿ ಮತ್ತು ಟಿವಿಯಲ್ಲಿ ಪಂದ್ಯಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಇವರಿಹಗೆ ವಹಿಸಲಾಗಿದೆ.

ಟೀಂ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮುಂಬೈನಲ್ಲಿ ನಡೆಯುವ ಪಂದ್ಯಗಳ ಮೇಲೆ ಕಣ್ಣಿಟ್ಟರೆ, ಶಿವಸುಂದರ್ ದಾಸ್ ಕೋಲ್ಕತ್ತಾ, ಆರ್.ಪಿ. ಸಿಂಗ್ ಮತ್ತು ಅಜಯ್ ರಾತ್ರ ದೆಹಲಿಯಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಉಳಿದಂತೆ ಪ್ರಗ್ಯಾನ್ ಓಜಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಕೆಲವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ.

ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯವನ್ನು ವೀಕ್ಷಿಸಬೇಕೆಂದು ಬಿಸಿಸಿಐ ಆದೇಶಿಸಿದೆ ಎಂದು ವರದಿಯಾಗಿದೆ. ಹಾಗೆಯೇ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

error: Content is protected !!