ಮಂಗಳೂರು: ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಜಪೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲತಃ ಪೆರ್ಮದೆ ಗ್ರಾಮದ ಭಟ್ರಕೆರೆ ಪ್ರಸ್ತುತ ಪೇಜಾವರ ಕೊಂಚಾರ ನಿವಾಸಿ ನಿಸಾರ್ @ ನಿಸಾರುದ್ದೀನ್ @ ಪಾರಿವಾಳ ನಿಸಾರ್ (28) ಹಾಗೂ ಉಳಾಯಿಬೆಟ್ಟು ಎಸ್‌ಎಂಎ ಸ್ಪೋರ್ಟ್ಸ್ ಕ್ಲಬ್ ಸಮೀಪದ ಮೊಹಮ್ಮದ್ ಜಮಾಲುದ್ದೀನ್ @ ಜಮಾಲ್ (24) ಬಂಧಿತ ಆರೋಪಿಗಳು.

ಘಟನೆಯ ವಿವರ: ದಿನಾಂಕ 18-03-2026ರಂದು ಮುಂಜಾನೆ ಸುಮಾರು 04:45 ಗಂಟೆಗೆ ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಸಸ್ತಾವು ಎಂಬಲ್ಲಿ ಫಾರ್ಚೂನರ್ ಕಾರಿನಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಎ.ಸಿ.ಪಿ ಶ್ರೀಕಾಂತ್ ಮತ್ತು ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಬಜಪೆ ಠಾಣಾ ಪಿ.ಎಸ್.ಐ ಲತಾ ಮತ್ತು ಸಿಬ್ಬಂದಿಯ ತಂಡವು ಸ್ಥಳದ ಮೇಲೆ ದಾಳಿ ನಡೆಸಿತು.

ಪೊಲೀಸರ ದಾಳಿಯ ಸಂದರ್ಭದಲ್ಲಿ ಆರೋಪಿಗಳು ಕಾರು ಮತ್ತು ಮಾಲುಗಳನ್ನು ಬಿಟ್ಟು ಪರಾರಿಯಾಗಿದ್ದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕಾರಿನೊಳಗೆ 4 ಜಾನುವಾರುಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ. ಪೊಲೀಸರು ಜಾನುವಾರು ಸಾಗಾಟಕ್ಕೆ ಬಳಸಿದ್ದ ಫಾರ್ಚೂನರ್ ಕಾರ್, ಅಕ್ರಮವಾಗಿ ಸಾಗಿಸುತ್ತಿದ್ದ 4 ದನಗಳು, ಒಂದು ತಲವಾರ್ ಮತ್ತು ಒಂದು ಕಬ್ಬಿಣದ ರಾಡ್ ವಶಪಡಿಸಿದ್ದಾರೆ. ಸೊತ್ತುಗಳ ಒಟ್ಟು ಮೌಲ್ಯ ಸುಮಾರು 8 ಲಕ್ಷ 42 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಆರೋಪಿಗಳ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.