ʻಕೆಡಿʼ ಹಾಡಿಗೆ ಮುಸ್ಲಿಂ ದಾರುಲ್ ಕಿಡಿಕಿಡಿ: ಫತ್ವಾ ಬೆನ್ನಲ್ಲೇ ಉಲ್ಟಾ ಹೊರಡೆದ ನೊರಾ!

ಸ್ಯಾಂಡಲ್‌ವುಡ್‌ನ ʻಕೆಡಿ’ ಚಿತ್ರದ ʻಸರ್ಸೆ ಸೆರಗ ಸರ್ಸೆ’ ಹಾಡು ಈಗ ಕೇವಲ ಬೆಳ್ಳಿಪರದೆಯ ವಿಷಯವಾಗಿ ಉಳಿದಿಲ್ಲ. ಉತ್ತರ ಪ್ರದೇಶದ ಆಲಿಗಢದಿಂದ ಹೊರಬಿದ್ದ ಒಂದು ಫತ್ವಾ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕೆನಡಾ ಮೂಲದ ಮುಸ್ಲಿಂ ನಟಿ ನೋರಾ ಫತೇಹಿ ಅವರ ನೃತ್ಯ ಧರ್ಮದ ಚೌಕಟ್ಟು ಮೀರಿದೆ ಎಂಬ ಆರೋಪ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

Nora Fatehi 1
ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದ ಧಾರ್ಮಿಕ ಮುಖಂಡರು ನೋರಾ ಫತೇಹಿ ವಿರುದ್ಧ ಫತ್ವಾ ಜಾರಿಗೊಳಿಸುವ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಹಾಡಿನಲ್ಲಿರುವ ನೃತ್ಯ ಭಂಗಿಗಳು ಮತ್ತು ಉಡುಪುಗಳು ಇಸ್ಲಾಮಿಕ್ ಬೋಧನೆಗಳಿಗೆ ಸಂಪೂರ್ಣ ವಿರುದ್ಧವಾಗಿವೆ ಎಂಬುದು ಅವರ ವಾದ. “ಕಲಾವಿದೆಯಾದರೂ ಧರ್ಮದ ಘನತೆಯನ್ನು ಕಾಪಾಡಿಕೊಳ್ಳಬೇಕು” ಎಂಬ ಸಂದೇಶದೊಂದಿಗೆ ಹೊರಬಿದ್ದ ಈ ಫತ್ವಾ, ನೋರಾ ಅವರ ವೃತ್ತಿಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲ ಗಾಸಿಪ್ ಲೋಕದಲ್ಲಿ ಮನೆಮಾಡಿದೆ.

ಫತ್ವಾ ಹೊರಬೀಳುತ್ತಿದ್ದಂತೆ ಎಚ್ಚೆತ್ತ ನೋರಾ ಫತೇಹಿ, ಈ ವಿವಾದದಿಂದ ತಮ್ಮನ್ನು ತಾವು ದೂರವಿರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. “ನಾನು ಕೇವಲ ನಟಿ, ನಿರ್ದೇಶಕರು ಹೇಳಿದಂತೆ ಮಾಡಿದ್ದೇನೆ. ನನಗೆ ಕನ್ನಡದ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ” ಎಂದು ಹೇಳುವ ಮೂಲಕ ತಮ್ಮ ಮೇಲಿನ ಧಾರ್ಮಿಕ ಮತ್ತು ಕಾನೂನು ಹೊಣೆಯನ್ನು ಚಿತ್ರತಂಡದ ಮೇಲೆ ವರ್ಗಾಯಿಸಲು ಯತ್ನಿಸಿದ್ದಾರೆ. ವಿಶೇಷವೆಂದರೆ, ಅವರು ಈ ಹಾಡನ್ನು ಬಹಿರಂಗವಾಗಿ ದ್ವೇಷಿಸುತ್ತಿರುವುದಾಗಿ ಹೇಳಿರುವುದು ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿದೆ.

ಈ ವಿವಾದ ಕೇವಲ ಫತ್ವಾಕ್ಕೆ ನಿಂತಿಲ್ಲ; ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣದಲ್ಲಿ ಪೋಕ್ಸೊ (POCSO) ಮತ್ತು ಐಟಿ ಕಾಯ್ದೆಯಡಿ ತನಿಖೆಗೆ ಮುಂದಾಗಿದೆ. ಹಾಡಿನಲ್ಲಿ ಬಳಕೆಯಾಗಿರುವ ಎಐ (AI) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಫೋಟೋಗಳು ಮತ್ತು ಲೈಂಗಿಕವಾಗಿ ಸೂಚಿಸುವ ಸಾಹಿತ್ಯವು ಈಗ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ಈಗಾಗಲೇ ಹಾಡನ್ನು ನಿಷೇಧಿಸಿರುವುದರಿಂದ, ಚಿತ್ರದ ಬಿಡುಗಡೆಗೆ ಮುನ್ನವೇ ʻಕೆಡಿ’ ತಂಡಕ್ಕೆ ದೊಡ್ಡ ಆರ್ಥಿಕ ಹೊಡೆತ ಬಿದ್ದಂತಾಗಿದೆ.

ನಿರ್ದೇಶಕ ಪ್ರೇಮ್ ಮತ್ತು ತಂಡದ ಮೇಲೆ ಈಗ ಭಾರಿ ಒತ್ತಡವಿದೆ. ಮಾರ್ಚ್ 24ರಂದು ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಫತ್ವಾದಂತಹ ಧಾರ್ಮಿಕ ವಿರೋಧಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಚಿತ್ರದ ಪ್ರಚಾರಕ್ಕಾಗಿ ಬಳಸಿದ ತಂತ್ರವೇ ಈಗ ಚಿತ್ರಕ್ಕೆ ಮುಳುವಾಗಿದೆಯೇ ಎಂಬ ಚರ್ಚೆ ಗಾಂಧಿನಗರದ ಹಾದಿಬೀದಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.

error: Content is protected !!