
ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಹಳದೀಪುರ ಅಗ್ರಹಾರ ಸಮೀಪ ಗುರುವಾರ(ಮಾ.19) ರಾತ್ರಿ ಸಂಭವಿಸಿದೆ.


ನವಿಲಗೋಣ ಗ್ರಾಮದ ಚಿಪ್ಪಿಹಕ್ಕಲ್ ನಿವಾಸಿ ವೆಂಕಟೇಶ ಗೋಪಾಲಕೃಷ್ಣ ಮೃತ ದುರ್ದೈವಿ.
ವೆಂಕಟೇಶ್ ಅವರು ವೃತ್ತಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ಮನೆಯಿಂದ ಹಳದೀಪುರಕ್ಕೆ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಅವರು ಹೆಲ್ಮೆಟ್ ಧರಿಸದ ಕಾರಣ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ಅತಿಯಾದ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.