ಬ್ರಹ್ಮಾವರ: ಪಾಳುಬಿದ್ದ ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಿಕೆ ಮಠ ಎಂಬಲ್ಲಿ ಗುರುವಾರ(ಮಾ.19) ಸಂಭವಿಸಿದೆ.

ತಮಿಳುನಾಡು ಮೂಲದ ಅರುಣ್ (38) ಮೃತ ವ್ಯಕ್ತಿ.
ಅರುಣ್ ಅವರು ಗುರುವಾರ ಮಧ್ಯಾಹ್ನ ಗರಿಕೆ ಮಠದ ಬಳಿಯಿರುವ ಆಳವಾದ ಕ್ವಾರಿ ಹೊಂಡಕ್ಕೆ ಈಜಲು ಇಳಿದಿದ್ದರು. ನೀರಿನ ಆಳದ ಅರಿವಿಲ್ಲದೆ ಹೊಂಡದ ಮಧ್ಯಭಾಗಕ್ಕೆ ತೆರಳಿದ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.


ಈ ಕ್ವಾರಿಯು ಸುಮಾರು 30 ಅಡಿಗಿಂತಲೂ ಹೆಚ್ಚು ಆಳವಾಗಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರಸಿದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.