ಮಂಗಳೂರು: “ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಮಹಿಳಾ ಆಯೋಗ ಮತ್ತು ಡಿಜಿಪಿವರೆಗೆ ದೂರು ನೀಡಿರುವ ಸಂತ್ರಸ್ತೆ ಎಂದು ಕರೆಸಿಕೊಂಡಿರುವ ಮಹಿಳೆಯ ಹಿಂದೆ ನನ್ನ ತಂಗಿ ಸುಮತಿ ನಾಯ್ಕ್ ಎಂಬಾಕೆ ಇದ್ದಾಳೆ” ಎಂದು ಆಕೆಯ ಸ್ವಂತ ಅಕ್ಕ ಪ್ರಫುಲ್ಲಾ ನಾಯ್ಕ್ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನನ್ನ ತಂಗಿ ಮಾಡುವುದೆಲ್ಲಾ ನೀಚ ಕೆಲಸ, ಅವಳ ನಡವಳಿಕೆಯೇ ಸರಿ ಇಲ್ಲ. ಈಗ ನೀಡಿರುವ ದೂರು ಒಬ್ಬ ದಕ್ಷ ಅಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೆಣೆಯಲಾದ ವಿಕೃತ ಸಂಚಿನ ಅನಾವರಣ” ಎಂದು ಆರೋಪಿಸಿದ್ದಾರೆ.

ಸುಮತಿ ನಾಯ್ಕ್ ವಿರುದ್ಧ ಮಡಿವಾಳ ಠಾಣೆಯಲ್ಲಿ, ತಮಿಳುನಾಡಿನಲ್ಲಿ ವೇಶ್ಯಾವಾಟಿಕೆ ದಂಧೆಯ ಕೇಸ್ ದಾಖಲಾಗಿದೆ, ಅದಕ್ಕೆ ಬೇಕಾದ ದಾಖಲೆಗಳೂ ಇವೆ. ಮಂಗಳೂರು, ಕಾರ್ಕಳ, ಮೂಡುಬಿದಿರೆ ಹೀಗೆ ಹೋದ ಕಡೆಯಲ್ಲಾ ಈಕೆ ಮಾಡುವುದು ಇದೇ ಕೆಲಸ. ನವೀನ್ ಪಿಂಟೋ ಎಂಬ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು, ಉಲ್ಟಾ ತಾನೇ ಆಸ್ಪತ್ರೆಗೆ ದಾಖಲಾಗಿ 3 ಲಕ್ಷ ರೂಪಾಯಿ ವಸೂಲಿ ಮಾಡಿದ ಚರಿತ್ರೆ ಈಕೆಯದ್ದು. ಉದ್ಯೋಗವಿಲ್ಲದಿದ್ದರೂ 75 ಲಕ್ಷ ರೂಪಾಯಿ ವೆಚ್ಚದ ಬಂಗಲೆ ಕಟ್ಟಿದ ಈಕೆಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಎಂದು ಪ್ರಫುಲ್ಲಾ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಮೇ 9ರಂದು ನನ್ನ ಮತ್ತು ಗಂಡನ ನಡುವಿನ ಕೌಟುಂಬಿಕ ಕಲಹದ ವಿಚಾರವಾಗಿ ಮೂಡಬಿದ್ರೆ ಠಾಣೆಯಲ್ಲಿ ವಿಚಾರಣೆ ಇತ್ತು. ಅಲ್ಲಿಗೆ ಅನಿವಾರ್ಯವಲ್ಲದಿದ್ದರೂ ಸುಮತಿ ನಾಯ್ಕ್ ನುಗ್ಗಿದ್ದಳು. ಕಾನ್ಸ್ಟೇಬಲ್ ಅವರು “ಯಾಕಮ್ಮ ಹೀಗೆ ಮಾಡ್ತೀಯಾ, ಅವಳು ನಿನ್ನ ಅಕ್ಕ ಅಲ್ವಾ?” ಎಂದು ಸಮಾಧಾನ ಪಡಿಸಲು ಹೋದರೂ ಸುಮತಿ ಮಾತ್ರ ರಂಪಾಟ ನಿಲ್ಲಿಸಲಿಲ್ಲ. ಇನ್ಸ್‌ಪೆಕ್ಟರ್ ಸಂದೇಶ್ ಅವರು ಬಂದಾಗಲೂ ಈಕೆಯ ಬೊಬ್ಬೆ ಮುಗಿಲು ಮುಟ್ಟಿತ್ತು. “ಯಾಕೆ ಬೊಬ್ಬೆ ಹೊಡೆಯುತ್ತೀಯಾ? ಇದು ಗಂಡ-ಹೆಂಡತಿಯ ವಿಷಯ, ಸರಿ ಮಾಡಿಕೊಂಡು ಹೋಗಿ” ಎಂದು ಅವರು ಬುದ್ಧಿ ಹೇಳಿದ್ದೇ ಈಗ ಅವರಿಗೆ ಮುಳುವಾಗಿದೆ! ಎಂದರು.

ಇನ್ಸ್‌ಪೆಕ್ಟರ್ ಅವರು ವಿಷಯ ಬಗೆಹರಿಸಲು ಒಳಗಡೆ ಕರೆದಾಗ, ಸುಮತಿ ಅಲ್ಲಿ ಸಿದ್ದರಾಮಯ್ಯನವರ ಹೆಸರು ಹೇಳಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೆ ಆಕೆಯ ಮಗ ಸ್ಟೇಷನ್ ಒಳಗೇ ವಿಡಿಯೋ ಮಾಡಲು ಶುರು ಮಾಡಿದ್ದಾನೆ. “ಸ್ಟೇಷನ್ ಒಳಗೆ ವಿಡಿಯೋ ಮಾಡುವ ಹಾಗಿಲ್ಲ” ಎಂದು ಮೊಬೈಲ್ ತೆಗೆದುಕೊಳ್ಳಲು ಹೋದಾಗ ಸುಮತಿ ತನ್ನ ಚಪ್ಪಲಿಯನ್ನೇ ಕೈಗೆತ್ತಿಕೊಂಡಿದ್ದಾಳೆ! ಆಗ ನಾನು “ಸಾರ್, ಇವಳು ವೇಶ್ಯಾವಾಟಿಕೆ ದಂಧೆ ಮಾಡುವವಳು, ಇವಳ ನಡವಳಿಕೆ ಸರಿ ಇಲ್ಲ, ಏನಾದರೂ ಮಾಡಿ ನಮಗೆ ನ್ಯಾಯ ಕೊಡಿಸಿ” ಎಂದು ಅಳಲು ತೋಡಿಕೊಂಡಿದ್ದೆ. ಇಷ್ಟಕ್ಕೆ ಕುಪಿತಗೊಂಡ ಸುಮತಿ ಮಗ ನನಗೆ ಹೊಡೆಯಲು ಬಂದಾಗ, ಇನ್ಸ್‌ಪೆಕ್ಟರ್ ಸಂದೇಶ್ ಅವರು ಅಡ್ಡ ಬಂದು ಆತನಿಗೆ ಎರಡು ಏಟು ನೀಡಿ ರೂಮಿನಲ್ಲಿ ಕೂರಿಸಿದ್ದಾರೆ. “ನನ್ನ ಮಗನಿಗೆ ಹೊಡೆದರು” ಎನ್ನುವ ಆ ಒಂದೇ ಒಂದು ʻದ್ವೇಷ’ ಇಟ್ಟುಕೊಂಡು, ಕಳೆದ ಒಂದು ವರ್ಷದಿಂದ ಇನ್ಸ್‌ಪೆಕ್ಟರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ಅವರನ್ನು ಅಧಿಕಾರದಿಂದ ಇಳಿಸಲೇಬೇಕು ಎಂದು ಸುಮತಿ ಹಠಕ್ಕೆ ಬಿದ್ದಿದ್ದಾಳೆ ಎಂದು ಪ್ರಫುಲ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಸುಮತಿ ನಾಯ್ಕ್‌ನ ಕುತಂತ್ರದಿಂದಾಗಿ ಇಂದು ಸಮಾಜದಲ್ಲಿ ತಲೆ ಎತ್ತಿ ನಡೆಯದಂತಾಗಿದೆ. ನನ್ನ ಹೆತ್ತ ಮಗ ಮಾತ್ರ ಸುಮತಿಯ ವಶದಲ್ಲಿದ್ದಾನೆ. ಸುಮತಿಯ ಗಂಡ ತೀರಿಹೋದ ಮೇಲೆ, ನನ್ನ ಗಂಡ ಕೂಡ “ನಿನ್ನ ತಂಗಿಯ ನಡವಳಿಕೆ ಸರಿ ಇಲ್ಲ” ಎಂದು ಅವಳನ್ನು ಬಿಟ್ಟು ಬಂದಿದ್ದರು. ಆದರೆ ಮಗನನ್ನು ಮಾತ್ರ ಆಕೆ ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ. ನನ್ನ ಸ್ವಂತ ಮಗನನ್ನು ಅವಳ ಬಳಿಯಿಂದ ಬಿಡಿಸಿಕೊಂಡು ಬರುವಷ್ಟು ಸಾಮರ್ಥ್ಯ ನನಗಿಲ್ಲ. ಹೆತ್ತ ಮಗನನ್ನೇ ನನಗೆ ಸಿಗದಂತೆ ಮಾಡಿದ ಆಕೆ, ಈಗ ನಮಗೆ ಸಹಾಯ ಮಾಡಿದ ಅಧಿಕಾರಿಯ ಕೆರಿಯರ್ ನಾಶ ಮಾಡಲು ಹೊರಟಿದ್ದಾಳೆ. ಅವರು ನ್ಯಾಯ ಕೊಡಿಸಲು ಬಂದಿದ್ದೇ ತಪ್ಪಾ?” ಎಂದು ಪ್ರಫುಲ್ಲಾ ಪ್ರಶ್ನಿಸಿದರು.

ಪ್ರಫುಲ್ಲಾ ನಾಯ್ಕ್ ಕಣ್ಣೀರು ಹಾಕುತ್ತಾ, ಅಮ್ಮನ ತಲೆ ಕೆಡಿಸಿ ನಮ್ಮ ನಾಲ್ಕು ಎಕರೆ ಜಾಗವನ್ನೂ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ನನ್ನ ಮಗನನ್ನೂ ಕಿತ್ತುಕೊಂಡಿದ್ದಾಳೆ. ಒಬ್ಬ ದಕ್ಷ ಅಧಿಕಾರಿಯ ಕೆರಿಯರ್ ಹಾಳಾಗಬಾರದು. ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಸುವರ್ಣ ಕರ್ನಾಟಕ ಜೈಭೀಮ್ ಯುವ ಸೇನೆ ರಾಜ್ಯಾಧ್ಯಕ್ಷ ವರ್ತೂರು ಮಂಜುನಾಥ್ ಮಾತನಾಡಿ, “ಯಾವ ಇನ್ಸ್‌ಪೆಕ್ಟರ್‌ಗೆ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಬಂತೋ, ಅದೇ ಅಧಿಕಾರಿ ಲಂಚ ಕೊಟ್ಟಿದ್ದಾರೆ ಎಂದು ಆರೋಪ ಮಾಡುವುದು ಎಷ್ಟು ಸರಿ? ಇನ್ಸ್‌ಪೆಕ್ಟರ್ ಮೇಲೆ ಸಾಕ್ಷಿ ಇಲ್ಲದೆ ಕೇವಲ ಅರ್ಜಿ ಕೊಟ್ಟರೆ ಅವರು ಅಪರಾಧಿಯಾಗುತ್ತಾರಾ? 5-6 ವರ್ಷಗಳ ಹಿಂದೆ ಮೂಡುಬಿದಿರೆ ಹೇಗಿತ್ತು, ಈಗ ಹೇಗಿದೆ ಅಂತ ಅಲ್ಲಿನ ಜನರನ್ನು ಕೇಳಿ ನೋಡಿ. ಗಾಂಜಾ ದಂಧೆಗೆ ಬ್ರೇಕ್ ಹಾಕಿ, ಕಾನೂನು ಸುವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಟ್ಟಿದ್ದೇ ಈ ಸಂದೇಶ್ ಮಾಡಿದ ಅಪರಾಧವೇ?“ ಎಂದು ಪ್ರಶ್ನಿಸಿದರು.

ಕ್ರೈಸ್ತ ಸಮುದಾಯದ ಸಮಾರಂಭಗಳಲ್ಲಿ ಸಮುದಾಯದವರೊಂದಿಗೆ ಕೈ ಹಿಡಿದು ಡ್ಯಾನ್ಸ್ ಮಾಡುವುದು ಒಂದು ಸಂಭ್ರಮದ ಭಾಗ. ಆ ವಿಡಿಯೋವನ್ನು ಇಟ್ಟುಕೊಂಡು ʻಕಾಮುಕ’ ಎನ್ನುವ ಸುಮತಿಯ ವಿಕೃತಿ ಎಂತಹದ್ದು? ಅವರು ಯಾರೊಂದಿಗಾದರೂ ಅಸಭ್ಯವಾಗಿ ವರ್ತಿಸಿದ್ದಾರಾ? ಅಣ್ಣ-ತಂಗಿಯಂತೆ ಒಟ್ಟಿಗೆ ಹೋದವರನ್ನು ಮಿಸ್ ಅಂಡರ್‌ಸ್ಟ್ಯಾಂಡ್ ಮಾಡಿಕೊಂಡು ಚಾರಿತ್ರ್ಯ ಹರಣ ಮಾಡುವುದು ಯಾವ ಸೀಮೆಯ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಮೇ 9ರಂದು ನಾನೂ ಕೂಡ ಸ್ಟೇಷನ್‌ಗೆ ಹೋಗಿದ್ದೆ. ಗಂಡ-ಹೆಂಡತಿ ವಿಚಾರದಲ್ಲಿ ಇನ್ಸ್‌ಪೆಕ್ಟರ್ ಗದರಿದ್ದು ನಿಜ. ಆದರೆ ಸುಮತಿ ಚಪ್ಪಲಿ ಕೈಗೆ ತೆಗೆದುಕೊಂಡಿರುವ ವಿಡಿಯೋ ಕೂಡ ನಮ್ಮ ಬಳಿ ಇದೆ ಎಂದು ಮಂಜುನಾಥ್ ಸವಾಲು ಹಾಕಿದ್ದಾರೆ. ವಿಡಿಯೋಗಳನ್ನು ಬೇಕಾಬಿಟ್ಟಿ ಎಡಿಟ್ ಮಾಡಿ, ಮಹಿಳಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ದಕ್ಷ ಅಧಿಕಾರಿಯನ್ನು ಹಣಿಯುವ ತಂತ್ರ ಇದಾಗಿದೆ. ನಿಜ ಸುಳ್ಳಾಗಬಾರದು, ದಕ್ಷ ಅಧಿಕಾರಿಗೆ ಅನ್ಯಾಯವಾಗಬಾರದು. ಒಂದು ವೇಳೆ ಸಂದೇಶ್ ಅವರಿಗೆ ಅನ್ಯಾಯವಾದರೆ ಸಮಿತಿ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಮಂಜುನಾಥ್ ಎಚ್ಚರಿಸಿದ್ದಾರೆ.
ಜೈಭೀಮ್ ಯುವ ಸೇನೆಯ ಸದಸ್ಯ ಹರೀಶ್ ಮೂಡಬಿದ್ರೆ ಉಪಸ್ಥಿತರಿದ್ದರು.