ಆದರ್ಶ ಶಿಕ್ಷಕಿ, ಕಾಯಿಲೆ ಗುಣಪಡಿಸುವ ನಿಸ್ವಾರ್ಥ ಸೇವೆ: ಅಪಘಾತಕ್ಕೆ ಬಲಿಯಾದ ಕುಸುಮ ಟೀಚರ್ ನೆನೆದು ಕಣ್ಣೀರಿಟ್ಟ ಪಾವಂಜೆ ವಿದ್ಯಾರ್ಥಿಗಳು!

ಪಾವಂಜೆ: ನಿಲ್ದಾಣಕ್ಕೆ ನುಗ್ಗಿದ ಕುಡುಕ ಚಾಲಕನ ಲಾರಿಯಿಂದ ಮಗಳನ್ನು ರಕ್ಷಿಸಿ, ತನ್ನನ್ನೇ ಬಲಿ ಕೊಟ್ಟ ʻವೀರಮಾತೆʼ ಶಿಕ್ಷಕಿ ಕುಸುಮಾ(42) ಅದೆಷ್ಟೋ ಆರ್ತರ ಪಾಲಿಗೆ ಆಶಾದೀಪವಾಗಿದ್ದರು ಎನ್ನುವುದನ್ನು ಶ್ರೀವಾಣೀ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ನೆನಪಿಸಿಕೊಂಡಿದ್ದಾರೆ.

ಕುಸುಮ ಅವರು 01-06-1977 ರಂದು ಕುಂದಾಪುರದಲ್ಲಿ ಜನಿಸಿದ್ದರು. ಜ್ಞಾನದ ಹಸಿವು ಹೊಂದಿದ್ದ ಇವರು ಬಿ.ಎ (B.A), ಎಂ.ಎ (M.A) ಹಾಗೂ ಬಿ.ಎಡ್ (B.Ed) ಪದವಿಗಳನ್ನು ಗಳಿಸಿ ಉನ್ನತ ಶಿಕ್ಷಣ ಪಡೆದಿದ್ದರು. ಶ್ರೀ ಅರವಿಂದ ಕೋವಲನ್ ಅವರ ಧರ್ಮಪತ್ನಿಯಾಗಿದ್ದ ಇವರು, ಸುಮಲತಾ ಎ. ಕೋವಲನ್ ಎಂಬ ಮುದ್ದಾದ ಪುತ್ರಿಯನ್ನು ಪಡೆದಿದ್ದರು.

ಆದರ್ಶ ಶಿಕ್ಷಕಿಯಾಗಿ ಸೇವೆ:
ಕಳೆದ 4 ವರ್ಷಗಳಿಂದ ಪಾವಂಜೆಯ ಶ್ರೀವಾಣೀ ಶಾಲೆ, ನಾಗವೃಜ ಇಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಸುಮ ಅವರು, ಶಾಲೆಯ ಅಚ್ಚುಮೆಚ್ಚಿನ ಮಾದರಿ ಶಿಕ್ಷಕಿಯಾಗಿದ್ದರು. ಕೇವಲ ಪಾಠಕ್ಕೆ ಸೀಮಿತವಾಗದ ಇವರು, ಬಾಲಗೋಕುಲದಲ್ಲಿ ಶಿಕ್ಷಕಿಯಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಪುಟ್ಟ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿಯ ಪರಮ ಭಕ್ತೆಯಾಗಿದ್ದ ಇವರು, ಸದಾ ಹಸನ್ಮುಖಿಯಾಗಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು.

ನಿಸ್ವಾರ್ಥ ಸಮಾಜ ಸೇವೆ:
ಕುಸುಮ ಅವರ ವ್ಯಕ್ತಿತ್ವದ ಅತ್ಯಂತ ದೊಡ್ಡ ಆಯಾಮವೆಂದರೆ ಅವರ ನಿಸ್ವಾರ್ಥ ಜನಸೇವೆ. ಶ್ರೀ ನಿತ್ಯಾನಂದ ಸ್ವಾಮೀಜಿಯವರಿಂದ ಹಲವಾರು ವೈದ್ಯಕೀಯ ವಿಚಾರಗಳು ಹಾಗೂ ಮಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಇವರು, ಅನೇಕರ ಪಾಲಿಗೆ ಸಂಜೀವಿನಿಯಾಗಿದ್ದರು. ಎಷ್ಟೋ ಮಂದಿಯ ನರಸಂಬಂಧಿ ಸಮಸ್ಯೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸರಳ ಚಿಕಿತ್ಸೆಯ ಮೂಲಕ ಗುಣಪಡಿಸಿ ಧನ್ಯತೆ ಕಂಡಿದ್ದರು. ಅವರ ಈ ಕೈಗುಣ ಮತ್ತು ಸೇವಾ ಮನೋಭಾವ ಅಸಂಖ್ಯಾತ ಕುಟುಂಬಗಳಲ್ಲಿ ನಗು ತಂದಿತ್ತು.

ಮಗಳಿಗಾಗಿ ಪ್ರಾಣ ಕೊಟ್ಟ ʻವೀರ ಮಾತೆ’ ಇನ್ನಿಲ್ಲ!: ಪಾವಂಜೆ ಹೆದ್ದಾರಿಯಲ್ಲಿ ಕುಡುಕ ಚಾಲಕನ ಅಟ್ಟಹಾಸಕ್ಕೆ ಬಲಿಯಾಯ್ತು ಅಮಾಯಕ ಜೀವ!

ಸಾವಿನಲ್ಲೂ ಮೆರೆದ ತ್ಯಾಗ:
ಕಳೆದ ಫೆಬ್ರವರಿ 6ರ ಸಂಜೆ ಆ ಕರಾಳ ಕ್ಷಣದಲ್ಲಿ ಯಮಧೂತನಂತೆ ಲಾರಿ ಬಂದಾಗ, ಕುಸುಮ ಅವರು ಕ್ಷಣಾರ್ಧದಲ್ಲಿ ಮಗಳನ್ನು ಪಕ್ಕಕ್ಕೆ ದೂಡಿ ಸಾವಿನಿಂದ ಪಾರು ಮಾಡಿದರು. ಆದರೆ, ತಾಯಿ ಮಾತ್ರ ಲಾರಿಯ ಬೃಹತ್ ಚಕ್ರಗಳ ಅಡಿಗೆ ಸಿಲುಕಿ ಜಜ್ಜಲ್ಪಟ್ಟರು. ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಮಗಳು ಸುರಕ್ಷಿತವಾಗಿದ್ದಾಳೆ ಎಂಬ ತೃಪ್ತಿ ಅವರ ಕಣ್ಣಲ್ಲಿತ್ತು. ಅಂತಿಮವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಚಿರನಿದ್ರೆಗೆ ಜಾರಿದ್ದಾರೆ.

BREAKING NEWS💥💥 ಪಾವಂಜೆ: ಪಾನಮತ್ತ ಲಾರಿ ಚಾಲಕನ ಅಟ್ಟಹಾಸಕ್ಕೆ ಮಹಿಳೆ ಗಂಭೀರ- ಅಪಘಾತದ ಮಧ್ಯೆ ಮಗಳನ್ನು ಪಾರು ಮಾಡಿದ ತಾಯಿ!

ಅವರ ಅಗಲುವಿಕೆಯು ಶ್ರೀ ವಾಣೀ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿ ವೃಂದಕ್ಕೆ ಅಪಾರ ನೋವನ್ನು ತಂದಿದೆ.

error: Content is protected !!