ಪಾವಂಜೆ: ಸಾವು ಕಣ್ಣೆದುರು ಬಂದಾಗ ಮಗಳ ಪ್ರಾಣ ಉಳಿಸಲು ತನ್ನನ್ನೇ ಕಾಲನಿಗೆ ಅರ್ಪಿಸಿದ ಆ ವೀರ ತಾಯಿ, ಅಂತಿಮವಾಗಿ ಸೋತುಹೋಗಿದ್ದಾರೆ. ಪಾವಂಜೆ ಬಸ್ ನಿಲ್ದಾಣದಲ್ಲಿ ಪಾನಮತ್ತ ಲಾರಿ ಚಾಲಕನ ಅಟ್ಟಹಾಸಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಪಾವಂಜೆ ನಿವಾಸಿ, ವಾಣಿ ಶಾಲೆಯ ಉದ್ಯೋಗಿ ಕುಸುಮ (42), ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ತಿಂಗಳು ಫೆ.6ರ ಶುಕ್ರವಾರ ಸಂಜೆ ಪಾವಂಜೆಯಲ್ಲಿ ನಡೆದ ಆ ಘಟನೆ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿತ್ತು. ಅತಿವೇಗವಾಗಿ ಬಂದ ಲಾರಿ ಬಸ್ ನಿಲ್ದಾಣಕ್ಕೆ ನುಗ್ಗಿದಾಗ, ಕುಸುಮ ಅವರು ತಕ್ಷಣವೇ ಮಗಳನ್ನು ಪಕ್ಕಕ್ಕೆ ದೂಡಿ ಸಾವಿನ ದವಡೆಯಿಂದ ಪಾರು ಮಾಡಿದ್ದರು.

ಸ್ಥಳದಲ್ಲಿದ್ದ ಪ್ರಯಾಣಿಕದು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ, ತಾಯಿ ಮಾತ್ರ ಲಾರಿಯ ಬೃಹತ್ ಚಕ್ರಗಳ ಅಡಿ ಸಿಲುಕಿ ಹೋಗಿದ್ದರು. ದೇಹವೆಲ್ಲಾ ಜಜ್ಜಲ್ಪಟ್ಟು, ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಅವರ ಕಣ್ಣಲ್ಲಿ ಮಗಳು ಸುರಕ್ಷಿತವಾಗಿದ್ದಾಳೆ ಎಂಬ ಸಮಾಧಾನವಿತ್ತು. ತಕ್ಷಣ ಅವರನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಣ್ಣೀರಲ್ಲಿ ಮಳುಗಿದ ಪಾವಂಜೆ:
ವಾಣಿ ಶಾಲೆಯಲ್ಲಿ ಕೆಲಸ ಮುಗಿಸಿ ಮಗಳ ಕೈಹಿಡಿದು ಮನೆಗೆ ಮರಳಬೇಕಿದ್ದ ತಾಯಿ, ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚಿರನಿದ್ರೆಗೆ ಜಾರಿದ್ದಾರೆ. ಮಗಳ ಬದುಕಿಗೆ ಬೆಳಕಾಗಬೇಕಿದ್ದ ಜೀವ, ಒಬ್ಬ ಕುಡುಕ ಚಾಲಕನ ಬೇಜವಾಬ್ದಾರಿಯಿಂದಾಗಿ ಅಸ್ತಮಿಸಿ ಹೋಗಿದೆ.

ಕುಸುಮ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪಾವಂಜೆ ಪರಿಸರದಲ್ಲಿ ಶೋಕಸಾಗರ ಆವರಿಸಿದೆ. ವಾಣಿ ಶಾಲೆಯ ಸಿಬ್ಬಂದಿಯಾಗಿದ್ದ ಅವರ ಸರಳತೆ ಮತ್ತು ಮಗಳ ಮೇಲಿದ್ದ ಮಮತೆಯನ್ನು ನೆನೆದು ಸ್ಥಳೀಯರು ಕಣ್ಣೀರಿಡುತ್ತಿದ್ದಾರೆ.

ಕುಸುಮ ಅವರ ಮರಣದ ನಂತರ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. “ಕುಡುಕ ಚಾಲಕನಿಗೆ ಕಠಿಣ ಶಿಕ್ಷೆಯಾಗಬೇಕು. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವವರಿಂದಾಗಿ ಇನ್ನೂ ಎಷ್ಟು ಅಮಾಯಕರ ಬಲಿ ಬೇಕು?” ಎಂದು ಜನ ಪ್ರಶ್ನಿಸುತ್ತಿದ್ದಾರೆ. ರಸ್ತೆಯ ಸುರಕ್ಷತೆ ಮತ್ತು ಚಾಲಕರ ಮದ್ಯಪಾನ ತಪಾಸಣೆಯ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
