
ಪಾವಂಜೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾನಮತ್ತ ಲಾರಿ ಚಾಲಕನೊಬ್ಬ ಸೃಷ್ಟಿಸಿದ ಅಟ್ಟಹಾಸಕ್ಕೆ ಪಾವಂಜೆ ಪರಿಸರ ನಲುಗಿಹೋಗಿದೆ. ಬಸ್ ನಿಲ್ದಾಣದಲ್ಲಿ ಜನಜಂಗುಳಿ ಇದ್ದ ವೇಳೆ ನುಗ್ಗಿದ ಲಾರಿಯಿಂದಾಗಿ, ಮಹಿಳೆ ಲಾರಿಯಡಿ ಸಿಲುಕಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
ವಿಶೇಷವೆಂದರೆ ತಾಯಿ ಈ ಪರಿಸ್ಥಿತಿಯಲ್ಲೂ ಮಗಳನ್ನು ಲಾರಿಯ ಅಡಿಗಿ ಬೀಳದಂತೆ ದೂಡಿ ಮಗಳನ್ನು ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಪಾವಂಜೆ ನಿವಾಸಿ, ವಾಣಿ ಶಾಲೆಯ ಸಿಬ್ಬಂದಿ ಕುಸುಮ (42) ಗಂಭೀರ ಗಾಯಗೊಂಡವರು.

ತಪ್ಪಿದ ಭೀಕರ ದುರಂತ:
ಶುಕ್ರವಾರ ಸಂಜೆ ಪಾವಂಜೆ ಬಸ್ ನಿಲ್ದಾಣದ ಬಳಿ ಹತ್ತಾರು ವಿದ್ಯಾರ್ಥಿಗಳು ಮತ್ತು ಮಹಿಳೆಯರು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಉಡುಪಿ ಕಡೆಗೆ ಅತಿವೇಗವಾಗಿ ಧಾವಿಸಿ ಬಂದ ಲಾರಿ, ರಸ್ತೆ ಬದಿಯ ಬ್ಯಾರಿಕೇಡ್‌ಗಳನ್ನು ದಾಟಿ ನಿಯಂತ್ರಣ ಕಳೆದುಕೊಂಡು ಜನರಿದ್ದತ್ತ ನುಗ್ಗಿದೆ.
ಲಾರಿ ಬರುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿ, ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಗಳಿಗಾಗಿ ಜೀವವನ್ನೇ ಪಣಕ್ಕಿಟ್ಟ ಕುಸುಮ!
ಸ್ಥಳೀಯ ನಿವಾಸಿ, ವಾಣಿ ಶಾಲೆಯ ಸಿಬ್ಬಂದಿ ಕುಸುಮ(42) ಅವರು ಈ ವೇಳೆ ಮಗಳ ಜೊತೆಗೆ ಬಸ್ ಗಾಗಿ ಕಾಯುತ್ತಿದ್ದರು. ಲಾರಿ ನೇರವಾಗಿ ತಮ್ಮತ್ತ ನುಗ್ಗಿ ಬರುತ್ತಿರುವುದನ್ನು ಕಂಡು, ಕ್ಷಣಾರ್ಧದಲ್ಲಿ ಮಗಳನ್ನು ಪಕ್ಕಕ್ಕೆ ತಳ್ಳಿ ರಕ್ಷಿಸಿದ್ದಾರೆ. ಆದರೆ ಕುಸುಮ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಲಾರಿಯ ಬೃಹತ್ ಟೈರ್ ಅವರ ದೇಹದ ಮೇಲೆಯೇ ಹರಿದಿದೆ. ತೀವ್ರವಾಗಿ ಜಜ್ಜಲ್ಪಟ್ಟಿರುವ ಅವರನ್ನು ತಕ್ಷಣವೇ ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೈದ್ಯರ ಮೂಲಗಳ ಪ್ರಕಾರ, ಅವರ ಸ್ಥಿತಿ ಚಿಂತಾಜನಕವಾಗಿದೆ.

ಚಾಲಕನ ವಿರುದ್ಧ ಸಾರ್ವಜನಿಕರ ಆಕ್ರೋಶ:
ಅಪಘಾತದ ಬಳಿಕ ಲಾರಿಯಿಂದ ಕೆಳಗಿಳಿದ ಚಾಲಕ ಸಂಪೂರ್ಣ ಪಾನಮತ್ತನಾಗಿರುವುದು ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದ ನೂರಾರು ಸಾರ್ವಜನಿಕರು ಚಾಲಕನ ಮೇಲೆ ಹಲ್ಲೆಗೆ ಮುಂದಾಗಿ, “ಚಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದು ಪೊಲೀಸರೊಂದಿಗೆ ಗಲಾಟೆ ನಡೆಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹರಸಾಹಸ ಪಟ್ಟು ಚಾಲಕನನ್ನು ಸಾರ್ವಜನಿಕರ ಆಕ್ರೋಶದಿಂದ ರಕ್ಷಿಸಿ, ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ರಕ್ತಸಿಕ್ತವಾಯಿತು ಹೆದ್ದಾರಿ:
ಒಬ್ಬ ಬೇಜವಾಬ್ದಾರಿ ಚಾಲಕನ ಮದ್ಯದ ಅಮಲು, ಶಾಲೆಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಒಬ್ಬ ತಾಯಿಯ ಬದುಕನ್ನು ಅಂಧಕಾರಕ್ಕೆ ದೂಡಿದೆ. ಸ್ಥಳೀಯರು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.