ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ- 75ರ ಮಂಗಳೂರು-ಬೆಂಗಳೂರು ರಸ್ತೆಯ ಗುಂಡ್ಯ ಸಮೀಪದ ಶಿರಾಡಿ ಘಾಟಿಯ ಗಡಿಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಮೃತ್ಯು ಅಕ್ಷರಶಃ ಅಟ್ಟಹಾಸ ಮೆರೆದಿದೆ. ಧರ್ಮಸ್ಥಳದಿಂದ ತಿರುಪತಿ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಬೆಂಗಳೂರಿನಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಕಾರಿನಲ್ಲಿದ್ದ ಕೊಕ್ಕಡದ ಉದ್ಯಮಿ ಚಂದ್ರಶೇಖರ, ಕಕ್ಕಿಂಜೆಯ ಶ್ರೀಧರ ಹಾಗೂ ಜನಾರ್ದನ ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮಧ್ಯಾಹ್ನ ಸುಮಾರು 2:30ರ ಹೊತ್ತಿಗೆ ಧರ್ಮಸ್ಥಳದಿಂದ ಬೆಂಗಳೂರು ಮೂಲಕ ತಿರುಪತಿಗೆ ಹೊರಟಿದ್ದ ರಾಜಹಂಸ ಬಸ್, ಗುಂಡ್ಯ ಸಮೀಪದ ತಿರುವಿನಲ್ಲಿ ಕೊಕ್ಕಡದ ಉದ್ಯಮಿ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ ಅವರ ಕಾರಿಗೆ ಗುದ್ದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬೆಂಗಳೂರಿನಿಂದ ತಮ್ಮೂರಿನ ಕಡೆಗೆ ಬರುತ್ತಿದ್ದ ಆ ಮೂವರು ಜೀವಗಳು ತಮ್ಮ ಮನೆ ತಲುಪುವ ಮೊದಲೇ ಬಾರದ ಲೋಕಕ್ಕೆ ಪಯಣ ಬೆಳೆಸಿವೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ನಜ್ಜುಗುಜ್ಜಾಗಿದ್ದ ಕಾರಿನ ಒಳಗಿದ್ದವರನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾಗಿ ತಿಳಿದುಬಂದಿದೆ.
