ಗ್ಯಾಸ್ ಸಿಲಿಂಡರ್‌ಗೆ ಬರಗಾಲ ಇಲ್ಲ, ಗಾಬರಿ ಬೇಡ: ವದಂತಿ ನಂಬದಂತೆ ದ.ಕ. ಜಿಲ್ಲಾಧಿಕಾರಿ ಮನವಿ

ಮಂಗಳೂರು: ಹಾರ್ಮುಜ್ ಜಲಸಂಧಿಯ ಯುದ್ಧದ ಭೀತಿಯಿಂದ ಮಂಗಳೂರಿನಲ್ಲಿ ಅಡುಗೆ ಅನಿಲಕ್ಕೆ ತತ್ವಾರ ಶುರುವಾಗಬಹುದು ಎಂಬ ಆತಂಕಕ್ಕೆ ಈಗ ತೆರೆ ಬಿದ್ದಿದೆ. “ಜಿಲ್ಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಪೂರೈಕೆಯಲ್ಲಿ ಎಳ್ಳಷ್ಟೂ ವ್ಯತ್ಯಯವಾಗಿಲ್ಲ ಮತ್ತು ಮುಂದೆ ಆಗುವುದೂ ಇಲ್ಲ” ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಖಡಕ್ ಭರವಸೆ ನೀಡಿದ್ದಾರೆ. ಅಲ್ಲದೆ, ಗಾಬರಿಗೊಂಡು ಯಾರೂ ಎರಡೆರಡು ಸಿಲಿಂಡರ್ ಬುಕ್ ಮಾಡಬೇಡಿ, ಅದಕ್ಕೆ ಅವಕಾಶವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಂಆರ್‌ಪಿಎಲ್ ಮತ್ತು ಐಒಸಿಎಲ್‌ನಲ್ಲಿ ಫುಲ್ ಸ್ಟಾಕ್:
ಬಿಕ್ಕಟ್ಟಿನ ನಡುವೆಯೂ ಮಂಗಳೂರಿನ ಎಂಆರ್‌ಪಿಎಲ್ (MRPL) ಉತ್ಪಾದನೆಯಲ್ಲಿ ಯಾವುದೇ ಕಡಿತ ಮಾಡಿಲ್ಲ. ಆಡಳಿತ ನಿರ್ದೇಶಕರೇ ಈ ಬಗ್ಗೆ ಮಾಹಿತಿ ನೀಡಿದ್ದು, ಐಒಸಿಎಲ್ (IOCL) ಗೆ ಬೇಕಾದ ಅನಿಲ ಕೂಡ ನಿರಂತರವಾಗಿ ಆಮದಾಗುತ್ತಿದೆ. ಏಜೆನ್ಸಿಗಳು ಅನಗತ್ಯವಾಗಿ ಗ್ಯಾಸ್ ದಾಸ್ತಾನು ಮಾಡದಂತೆ ಪೊಲೀಸರು ಈಗಾಗಲೇ ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ ಕಣ್ಣಿಟ್ಟಿದ್ದಾರೆ. ಕೇವಲ ಜಿಲ್ಲೆಗೆ ಮಾತ್ರವಲ್ಲದೆ, ಹೈದರಾಬಾದ್ ಮತ್ತು ತಮಿಳುನಾಡಿಗೆ ಹೋಗುವ ಪೂರೈಕೆಯಲ್ಲೂ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.

ವಾಣಿಜ್ಯ ಬಳಕೆಗೆ ಮಾತ್ರ ತಾತ್ಕಾಲಿಕ ಬ್ರೇಕ್:
ಸಾರ್ವಜನಿಕರಿಗೆ ಒಂದು ಮುಖ್ಯ ಮಾಹಿತಿ ಎಂದರೆ, ಗೃಹ ಬಳಕೆಗೆ ತೊಂದರೆಯಿಲ್ಲದಿದ್ದರೂ ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಪೂರೈಕೆಗೆ ಸಂಬಂಧಿಸಿ ಸರ್ಕಾರದಿಂದ ಹೊಸ ಮಾನದಂಡ ಬರುವವರೆಗೂ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಆದರೆ, ದೇವಸ್ಥಾನದ ಅನ್ನ ದಾಸೋಹ, ಚರ್ಚ್, ಮಸೀದಿಗಳು, ಆಸ್ಪತ್ರೆ, ಹಾಸ್ಟೆಲ್ ಮತ್ತು ಮಿಲಿಟರಿ ಕ್ಯಾಂಟೀನ್‌ಗಳಂತಹ ತುರ್ತು ಸೇವಾ ಕೇಂದ್ರಗಳಿಗೆ ಯಾವುದೇ ಅಡ್ಡಿಯಿಲ್ಲದೆ ಅನಿಲ ಪೂರೈಕೆಯಾಗಲಿದೆ ಎಂದು ಡಿಸಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಸಿಲಿಂಡರ್ ಪೂರೈಕೆಯ ನಿಯಮದಂತೆ 25 ದಿನಕ್ಕೊಮ್ಮೆ ಗ್ಯಾಸ್ ಸಿಗುವುದು ಗ್ಯಾರಂಟಿ. ಹಾಗಾಗಿ ಕರಾವಳಿಯ ಜನತೆ ಸೋಷಿಯಲ್ ಮೀಡಿಯಾದಲ್ಲಿ ಬರುವ ವದಂತಿಗಳಿಗೆ ಕಿವಿಗೊಡದೆ ನಿರಾಳವಾಗಿರಬಹುದು.

error: Content is protected !!