ಮುಲ್ಕಿ: ಹಳೆಯಂಗಡಿ ಬಸ್ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಮಾತಾ ರೆಸಿಡೆನ್ಸಿ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ತೆರೆದ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹರಿಯುತ್ತಿದ್ದು ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಬಹು ಮಹಡಿ ಕಟ್ಟಡದ ಮಾಲೀಕರು ಕಳೆದ ಕೆಲವು ತಿಂಗಳಿನಿಂದ ಕಟ್ಟಡದ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿಡುತ್ತಿದ್ದಾರೆ. ಇದರಿಂದ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿರುವ ಪ್ರಯಾಣಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ, ತೊಂದರೆಯಾಗಿದ್ದು ಪರಿಸರದಲ್ಲಿ ರೋಗದ ಭೀತಿ ಎದುರಾಗಿದೆ.

ಈ ಬಗ್ಗೆ ಅನೇಕ ಬಾರಿ ಹಳೆಯಂಗಡಿ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ಬದಿಯಲ್ಲಿ ಬ್ಯಾನರ್ ಅಳವಡಿಸಿ ಉಗ್ರ ಪ್ರತಿಭಟನೆ ನಡೆಸುವ ಸೂಚನೆ ನೀಡಿದ್ದಾರೆ.


ಕಳೆದ ಎರಡು ದಿನಗಳಿಂದ ಬ್ಯಾನರ್ ಅಳವಡಿಸಿದ್ದು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಾರೆ ಎಂದು ಕೂಡ ನಮೂದಿಸಲಾಗಿದೆ. ಕೂಡಲೇ ಮುಲ್ಕಿ ತಾಲೂಕು ತಹಶೀಲ್ದಾರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತೆರೆದ ಸ್ಥಳದಲ್ಲಿ ತ್ಯಾಜ್ಯ ನೀರು ಹರಿಯಲು ಬಿಡುವ ಮಾತಾ ಬಹು ಮಹಡಿ ಕಟ್ಟಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ಪ್ರವೀಣ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಾತಾ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ತ್ಯಾಜ್ಯ ನೀರು ಹರಿದು ಹೋಗಲು ಸರಿಯಾದ ಫಿಟ್ ಇಲ್ಲದೆ ಎಲ್ಲೆಂದರಲ್ಲಿ ಹರಿಯುತ್ತಿದೆ. ತಿಂಗಳ ಹಿಂದೆ ನಮ್ಮ ಕಟ್ಟಡದ ಬದಿಯಲ್ಲಿ ತ್ಯಾಜ್ಯ ಹರಿಯುತ್ತಿದ್ದರಿಂದ ಸ್ಥಳೀಯ ಬಾವಿಗಳ ನೀರು ಕೂಡ ಮಲಿನ ಗೊಂಡಿದೆ. ಇದರಿಂದ ಸ್ಥಳೀಯ ನಾಗರಿಕರು ಒಟ್ಟಾಗಿ ತೆರೆದ ಸ್ಥಿತಿಯಲ್ಲಿ ಹರಿಯುತ್ತಿದ್ದ ತ್ಯಾಜ್ಯನೀರಿನ ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದು ಈಗ ಹೆದ್ದಾರಿ ಬದಿ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ವಾಹನ ಸವಾರರಿಗೆ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದ್ದು ರೋಗದ ಭೀತಿ ಎದುರಾಗಿದೆ. ಕೂಡಲೇ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತು ಬಹು ಮಹಡಿ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿ ಸರಿಪಡಿಸಬೇಕಾಗಿದೆ ಎಂದರು.