ಶಿರ್ವ: ಡೆತ್‌ನೋಟ್‌ ಬರೆದಿಟ್ಟು ಕ್ಯಾಟರಿಂಗ್ ಅಡುಗೆ ಕೆಲಸಗಾರ ಆತ್ಮಹತ್ಯೆ

ಶಿರ್ವ: ಸಮೀಪದ ಶಂಕರಪುರದ ಸಾಲ್ಮರ ಎಂಬಲ್ಲಿ ಕ್ಯಾಟರಿಂಗ್ ಶೆಡ್ ಒಂದರಲ್ಲಿ ಮುಖ್ಯ ಅಡುಗೆ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಗೌತಮ್ ಪೂಜಾರಿ ಎಂದು ಗುರುತಿಸಲಾಗಿದೆ. ಈತ ಸಾಲ್ಮರದ ಕ್ಯಾಟರಿಂಗ್ ಶೆಡ್ ಬಳಿಯಿರುವ ಕೊಠಡಿಯಲ್ಲಿ ವಾಸವಾಗಿದ್ದು, ಅಲ್ಲಿಯೇ ಮೃತದೇಹ ಪತ್ತೆಯಾಗಿದೆ. ಗೌತಮ್ ಅವಿವಾಹಿತನಾಗಿದ್ದ ಎಂದು ತಿಳಿದುಬಂದಿದೆ.

ಗೌತಮ್ ಪೂಜಾರಿ ಅವರು ಸ್ಥಳೀಯ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಮುಖ್ಯ ಅಡುಗೆ ಕೆಲಸಗಾರನಾಗಿ ವೃತ್ತಿ ಮಾಡುತ್ತಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದ ಇವರು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ಗೌತಮ್ ಅವರ ಈ ದಿಢೀರ್ ನಿರ್ಧಾರವು ಸ್ಥಳೀಯರಿಗೆ ಮತ್ತು ಸಹೋದ್ಯೋಗಿಗಳಿಗೆ ಆಘಾತ ಮೂಡಿಸಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗೌತಮ್ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಿರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರ ಹೆಚ್ಚಿನ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

error: Content is protected !!