ಕಾಸರಗೋಡು: ಮಗನ ಸಾವಿನ ಶೋಕದಲ್ಲಿದ್ದ ದಂಪತಿ ಆತ್ಮಹತ್ಯೆಗೆ ಶರಣು

ಕಾಸರಗೋಡು: ಏಕೈಕ ಮಗನ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ದಂಪತಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ ಪಾಯಿಚ್ಚಿಯಲ್ಲಿ ನಡೆದಿದೆ.

ಮೃತರನ್ನು ಪೊಯಿನಾಚಿಯ ಪರಂಬ ನಿವಾಸಿಗಳಾದ ವೇಣುಗೋಪಾಲನ್ ನಾಯರ್ (50) ಮತ್ತು ಅವರ ಪತ್ನಿ ಸ್ಮಿತಾ (42) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಇವರಿಬ್ಬರೂ ತಮ್ಮ ಮನೆಯ ಹಜಾರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಘಟನೆಯ ಹಿನ್ನೆಲೆ: ವೇಣುಗೋಪಾಲನ್ ಮತ್ತು ಸ್ಮಿತಾ ಅವರ ಏಕೈಕ ಪುತ್ರ, ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19), ಕಳೆದ ವರ್ಷದ ಡಿಸೆಂಬರ್ 29ರಂದು ಬೇಕಲ ಬೀಚ್ ಫೆಸ್ಟಿವಲ್ ವೇಳೆ ನಡೆದ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಸಂಗೀತ ಕಾರ್ಯಕ್ರಮವೊಂದಕ್ಕೆ ಹೋಗಲು ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಢಿಕ್ಕಿ ಹೊಡೆದ ಪರಿಣಾಮ ಶಿವನಂದನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಮನಕಲಕುವ ಸ್ಥಿತಿ: ಯಶಸ್ವಿ ಉದ್ಯಮಿಯಾಗಿದ್ದ ವೇಣುಗೋಪಾಲನ್ ಅವರು ಎರಡು ಟ್ರಾವೆಲ್ ಏಜೆನ್ಸಿಗಳನ್ನು ನಡೆಸುತ್ತಿದ್ದರು. ಆದರೆ ಮಗನ ಸಾವಿನ ನಂತರ ದಂಪತಿ ಮಾನಸಿಕವಾಗಿ ತೀವ್ರ ಕುಸಿದುಹೋಗಿದ್ದರು. ನೆರೆಹೊರೆಯವರು ಮತ್ತು ಸಂಬಂಧಿಕರು ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದರು. ಅಲ್ಲದೆ, ಸ್ಥಳೀಯ ಸಂಘಟನೆಗಳ ಮೂಲಕ ಅವರಿಗೆ ಕೌನ್ಸೆಲಿಂಗ್ ಕೂಡ ಕೊಡಿಸಲಾಗಿತ್ತು. ಆದರೂ ಮಗನ ಅಗಲಿಕೆಯ ನೋವಿನಿಂದ ಅವರು ಹೊರಬರಲು ಸಾಧ್ಯವಾಗಿರಲಿಲ್ಲ.

ಕೊನೆಯ ಸಂದೇಶ: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸ್ಮಿತಾ ಅವರು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಗನ ಬಾಲ್ಯದ ಸವಿನೆನಪುಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ. “ಮಗನಿಲ್ಲದೆ ಬದುಕು ಅಸಾಧ್ಯ” ಎಂದು ಅವರು ಆಗಾಗ್ಗೆ ಆಪ್ತರ ಮುಂದೆ ಹೇಳಿಕೊಳ್ಳುತ್ತಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ದಂಪತಿ  ಈ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!