ಹೆಮ್ಮಾಡಿಯ ‘ನರಕ’ದಲ್ಲಿ 30 ವರ್ಷ: ಕೊರಗ ಸಮುದಾಯದ ವೃದ್ಧನ ಕಣ್ಣೀರಿನ ಕಥೆ!

ಕುಂದಾಪುರ: ನಾವು 21ನೇ ಶತಮಾನದಲ್ಲಿದ್ದೇವೆ, ಮಂಗಳನ ಅಂಗಳಕ್ಕೆ ನೌಕೆ ಬಿಡುತ್ತಿದ್ದೇವೆ ಎಂದು ಬೀಗುತ್ತೇವೆ. ಆದರೆ, ಕರಾವಳಿಯ ಕುಂದಾಪುರದ ಹೆಮ್ಮಾಡಿಯಲ್ಲೊಂದು ʻನರಕ’ ಜೀವಂತವಾಗಿತ್ತು! ಬರೋಬ್ಬರಿ ಮೂರು ದಶಕಗಳ ಕಾಲ ಒಬ್ಬ ಮನುಷ್ಯನನ್ನು ಮನುಷ್ಯನಂತೆ ಕಾಣದೆ, ದನದ ಕೊಟ್ಟಿಗೆಯಲ್ಲಿ ಜೀತಕ್ಕಿಟ್ಟುಕೊಂಡಿದ್ದ ಅಮಾನವೀಯ ಘಟನೆ ಈಗ ಬೆಳಕಿಗೆ ಬಂದಿದೆ.

ರಜನಿ ಶೆಟ್ಟಿ

ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬ ನಿರಪರಾಧಿ ವೃದ್ಧ, ಕಳೆದ 30 ವರ್ಷಗಳಿಂದ ಅಕ್ಷರಶಃ ಬಂಧಿಯಾಗಿದ್ದರು. ಇವರೀಗ ತನಗಾದ ಸಂಕಷ್ಟವನ್ನು ಕುಂದಾಪುರ ಪೊಲೀಸರಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೊದಲು ಸುಬ್ಬಣ್ಣ ಶೆಟ್ಟಿ ಎಂಬುವವರ ಬಳಿ ಕೆಲಸಕ್ಕೆ ಸೇರಿದ್ದ ನಾಗ, ಅವರು ತೀರಿಕೊಂಡ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ಅವರ ಕ್ರೌರ್ಯಕ್ಕೆ ಬಲಿಯಾಗಿದ್ದರು. ತೋಟದ ಕೆಲಸ, ದನ ಕಾಯುವ ಕಾಯಕ.. ಎಲ್ಲವನ್ನೂ ಮಾಡಿಸಿಕೊಂಡ ಈ ʻಯಜಮಾನರು’ ನಾಗ ಅವರಿಗೆ ನೀಡಿದ್ದು ಮಾತ್ರ ಕೊಟ್ಟಿಗೆಯ ಒಂದು ಮೂಲೆ!

ಪೊಲೀಸರು ದನದ ಕೊಟ್ಟಿಗೆಯನ್ನು ಪರಿಶೀಲಿಸುತ್ತಿರುವ ದೃಶ್ಯ

ಕೊಟ್ಟಿಗೆಯೇ ಮನೆ, ಎಲೆಯೇ ತಟ್ಟೆ:
ನಾಗ ಅವರ ಬದುಕು ಎಷ್ಟು ದುಸ್ತರವಾಗಿತ್ತೆಂದರೆ, ಅವರಿಗೆ ಮನೆಯೊಳಗೆ ಪ್ರವೇಶವಿರಲಿಲ್ಲ. ತಿಂಡಿ, ತಟ್ಟೆ, ಬಟ್ಟೆ ಎಲ್ಲವನ್ನೂ ದನದ ಕೊಟ್ಟಿಗೆಯಲ್ಲೇ ಇಡಬೇಕಿತ್ತು. ಊಟವನ್ನೂ ಬಾಳೆ ಎಲೆಯಲ್ಲಿ ಹಾಕಿ ದೂರದಿಂದಲೇ ನೀಡಲಾಗುತ್ತಿತ್ತು. ಒಬ್ಬ ವ್ಯಕ್ತಿಯನ್ನು 30 ವರ್ಷಗಳ ಕಾಲ ಹೊರಗಿನ ಪ್ರಪಂಚ ನೋಡಲು ಬಿಡದೆ, ಕೂಲಿಯನ್ನೂ ನೀಡದೆ ಜೀತದಾಳಾಗಿ ಬಳಸಿಕೊಂಡ ಈ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು.

ಕೊನೆಗೂ ಈ ಮೌನ ಕ್ರೌರ್ಯಕ್ಕೆ ಮುಕ್ತಿ ಸಿಕ್ಕಿದೆ. ನಾಗ ಅವರು ನೀಡಿದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸರು ರಜನಿ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!