ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರೆ, ಕಾರ್ಕಳ ಮೂಲದ ವೈದ್ಯಕೀಯ ಸ್ನಾತಕೋತ್ತರ (PG) ವಿದ್ಯಾರ್ಥಿನಿ ಮೃತಪಟ್ಟಿದ್ದು, ಸಹ ಸವಾರ ಯುವತಿ ಗಂಭೀರ ಗಾಯಗೊಂಡಿದ್ದಾಳೆ.

ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ನಿವಾಸಿಗಳಾದ ಸತೀಶ್ ಮತ್ತು ಸುನೀತಾ ದಂಪತಿಯ ಪುತ್ರಿ ಲಾವಣ್ಯ (25) ಎಂದು ಗುರುತಿಸಲಾಗಿದೆ. ಇವರು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಸ್ಕೂಟರ್‌ನಲ್ಲಿದ್ದ ಮತ್ತೋರ್ವ ವಿದ್ಯಾರ್ಥಿನಿ ಓವೇರಿಯಾ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಅದೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಲಾವಣ್ಯ ಅವರು ತಮ್ಮ ಸಹಪಾಠಿ ಓವೇರಿಯಾ ಅವರೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ನೀರು ಪೂರೈಸುತ್ತಿದ್ದ ವಾಟರ್ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾವಣ್ಯ ಅವರು ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದಿದ್ದು, ಟ್ಯಾಂಕರ್‌ನ ಚಕ್ರ ಅವರ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆ ಆವರಣದಂತಹ ಸೂಕ್ಷ್ಮ ಪ್ರದೇಶದಲ್ಲಿ ವೇಗವಾಗಿ ಚಲಿಸುವ ವಾಹನಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.