ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ

ನವದೆಹಲಿ: ದೇಶಾದ್ಯಂತ ಮಹಿಳಾ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ʻಮುಟ್ಟಿನ ರಜೆ’ ಕಡ್ಡಾಯಗೊಳಿಸಬೇಕು ಎಂಬ ಪಿಐಎಲ್ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್ ಅವರ ಪೀಠ ತಿರಸ್ಕರಿಸಿಬಿಟ್ಟಿದೆ. ಅಷ್ಟೇ ಅಲ್ಲ, ಒಂದು ವೇಳೆ ಈ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯ ಮಾಡಿದರೆ, ನಾಳೆ ಯಾವ ಉದ್ಯೋಗದಾತನೂ ಹೆಣ್ಣುಮಕ್ಕಳಿಗೆ ಕೆಲಸವನ್ನೇ ಕೊಡಲ್ಲ ಎಂಬ ಕಹಿ ಸತ್ಯವನ್ನೂ ಕೋರ್ಟ್ ಬಿಚ್ಚಿಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ ಈ ಬಗ್ಗೆ ಬಹಳ ಪ್ರಾಕ್ಟಿಕಲ್ ಆಗಿ ಮಾತನಾಡಿದೆ. “ನೋಡಿ, ಸ್ವಯಂಪ್ರೇರಿತವಾಗಿ ರಜೆ ಕೊಟ್ಟರೆ ಒಳ್ಳೆಯದು. ಆದರೆ ನೀವು ಕಾನೂನು ಮೂಲಕ ಅದನ್ನು ಕಡ್ಡಾಯ ಮಾಡಿ ಎಂದರೆ, ಕಂಪೆನಿಗಳು ಮಹಿಳೆಯರನ್ನು ಕೆಲಸಕ್ಕೆ ತಗೊಳ್ಳುವುದನ್ನೇ ನಿಲ್ಲಿಸಿಬಿಡುತ್ತವೆ. ನೀವೆಲ್ಲ ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ಅವರ ವೃತ್ತಿಜೀವನಕ್ಕೆ ಫುಲ್‌ಸ್ಟಾಪ್ ಇಡುತ್ತಾರೆ” ಎನ್ನುವ ಮೂಲಕ ಉದ್ಯೋಗ ಮಾರುಕಟ್ಟೆಯ ಕರಾಳ ಮುಖವನ್ನು ಸುಪ್ರೀಂ ಎತ್ತಿ ತೋರಿಸಿದೆ.

ಕೀಳರಿಮೆ ಬೇಡ:
ಮುಟ್ಟೆನ್ನುವುದು ಮಹಿಳೆಯರ ಅಸ್ಮಿತೆ ಮತ್ತು ಹಕ್ಕು. ಆದರೆ ಅದನ್ನು ನೆಪ ಮಾಡಿಕೊಂಡು ಅವರಲ್ಲಿ ಕೀಳರಿಮೆ ಮೂಡಿಸುವ ಅಥವಾ ಅದೊಂದು ʻಅಶುಭ ಸಂಗತಿ’ ಎಂಬ ಭಯ ಸೃಷ್ಟಿಸುವ ಕೆಲಸ ಆಗಬಾರದು ಎಂಬುದು ನ್ಯಾಯಾಲಯದ ಖಡಕ್ ಆಶಯ.

ʻವೇತನ ಸಹಿತ ರಜೆ’ ನೀಡಬೇಕಾದ ಉದ್ಯೋಗದಾತರ ಆರ್ಥಿಕ ಹಿತಾಸಕ್ತಿಯನ್ನೂ ನಾವು ಮರೆಯುವಂತಿಲ್ಲ ಎಂದು ಪೀಠವು ಕಿವಿಮಾತು ಹೇಳಿದೆ. ಅಂತಿಮವಾಗಿ, ಈ ರಜೆಯನ್ನು ಕಡ್ಡಾಯಗೊಳಿಸಿದರೆ ಮಹಿಳೆಯರ ವೃತ್ತಿಜೀವನವೇ ಮುರುಟಿಹೋಗಬಹುದು ಎಂಬ ಆತಂಕದೊಂದಿಗೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.

error: Content is protected !!