ಆಪರೇಷನ್ ಕಮಲದ ಭೀತಿ; ʻಕೈ’ ಶಾಸಕರು ರೆಸಾರ್ಟ್‌ಗೆ ಶಿಫ್ಟ್-‌ ಡಿಕೆಶಿ ನೇತೃತ್ವ

ಬೆಂಗಳೂರು: ದೇಶದ ಯಾವುದೇ ಮೂಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸಂಕಷ್ಟ ಎದುರಾದರೆ ಸಾಕು, ಹೈಕಮಾಂಡ್ ಮೊದಲು ಡಯಲ್ ಮಾಡುವುದೇ ಬೆಂಗಳೂರಿನ ಸದಾಶಿವನಗರಕ್ಕೆ! ಹೌದು, ಇದು ʻಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್ ಅವರ ತಾಕತ್ತು. ಈಗ ಒಡಿಶಾ ಮತ್ತು ಅಸ್ಸಾಂನ ಶಾಸಕರಿಗೆ ಆಪರೇಷನ್ ಕಮಲದ ಭೀತಿ ಎದುರಾದಾಗ, ಮತ್ತೆ ನೆನಪಾಗಿದ್ದೇ ಇದೇ ಕನಕಪುರದ ಬಂಡೆ.

ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆಯ ಅಖಾಡ ರಂಗೇರಿದೆ. ಅಡ್ಡ ಮತದಾನದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಗಾಳ ಹಾಕುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ, ಎಐಸಿಸಿ ವೀಕ್ಷಕರೂ ಆಗಿರುವ ಡಿಕೆಶಿ ಆಖಾಡಕ್ಕಿಳಿದಿದ್ದಾರೆ. “ನಮ್ಮ ಶಾಸಕರ ಮೈ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ” ಎಂಬಂತೆ ಗುರುವಾರ ರಾತ್ರಿ ಭುವನೇಶ್ವರದಿಂದ ಶಾಸಕರನ್ನು ವಿಮಾನ ಹತ್ತಿಸಿ ಬೆಂಗಳೂರಿನಲ್ಲಿ ಇಳಿಸಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಳಿದ 14 ಮಂದಿ ಶಾಸಕರನ್ನು ಡಿಕೆಶಿ ಆಪ್ತರು ಅತ್ಯಂತ ಗೌಪ್ಯವಾಗಿ ಬರಮಾಡಿಕೊಂಡರು. ಅಲ್ಲಿಂದ ನೇರವಾಗಿ ಬಿಡದಿಯ ವಂಡರ್ ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಇದು ಡಿಕೆಶಿ ಅವರ ಹಳೆ ಅಖಾಡ. ಈ ಹಿಂದೆಯೂ ಗುಜರಾತ್ ಮತ್ತು ಮಹಾರಾಷ್ಟ್ರದ ಶಾಸಕರನ್ನು ಇದೇ ರೀತಿ ರಕ್ಷಿಸಿದ್ದ ಚರಿತ್ರೆ ಅವರದು. ಈಗ ಒಡಿಶಾ ಶಾಸಕರಿಗೂ ಬಿಡದಿಯ ತಟ್ಟೆ ಇಡ್ಲಿ ಜೊತೆಗೆ ರಾಜಕೀಯ ರಕ್ಷಣೆಯ ಭರವಸೆ ಸಿಕ್ಕಿದೆ.

ಅಲ್ಲಿ ಒಡಿಶಾದಲ್ಲಿ ಚುನಾವಣೆ ನಡೆಯುತ್ತಿದ್ದರೆ, ಇಲ್ಲಿ ಬೆಂಗಳೂರಿನಲ್ಲಿ ಕೂತು ಡಿ.ಕೆ. ಶಿವಕುಮಾರ್ ರಿಮೋಟ್ ಕಂಟ್ರೋಲ್ ಚಲಾಯಿಸುತ್ತಿದ್ದಾರೆ. ಶಾಸಕರ ಸುತ್ತ ಪೊಲೀಸ್ ಬಂದೋಬಸ್ತ್ ಮಾತ್ರವಲ್ಲದೆ, ತಮ್ಮ ನಂಬಿಕಸ್ತ ಪಡೆಯನ್ನು ಕಾವಲು ಇರಿಸಿದ್ದಾರೆ. ಬಿಜೆಪಿಯ ಆಪರೇಷನ್ ಕಮಲಕ್ಕೆ ಈ ಬಾರಿಯೂ ಡಿಕೆಶಿ ʻಬ್ರೇಕ್’ ಹಾಕುತ್ತಾರಾ? ಮಾರ್ಚ್ 16ರಂದು ಮತದಾನ ಮುಗಿಯುವವರೆಗೆ ಈ ರೆಸಾರ್ಟ್ ಪಾಲಿಟಿಕ್ಸ್‌ನ ಅಸಲಿ ಆಟಗಾರ ಡಿ.ಕೆ. ಶಿವಕುಮಾರ್ ಅವರೇ ಅನ್ನೋದರಲ್ಲಿ ಅನುಮಾನವೇ ಇಲ್ಲ.

ಜಗನ್ನಾಥನ ನಾಡಿನ ಶಾಸಕರು ಈಗ ಬೆಂಗಳೂರಿನ ಬಂಡೆಯ ನೆರಳಲ್ಲಿ ಸುರಕ್ಷಿತವಾಗಿದ್ದಾರೆ!

error: Content is protected !!