ಸುರತ್ಕಲ್: ಇಲ್ಲಿನ ಹೊಸಬೆಟ್ಟು ಪರಿಸರದ ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣವನ್ನು ಭೇದಿಸಿರುವ ಸುರತ್ಕಲ್ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿಯಾಗಿದ್ದು, ಸದ್ಯ ಬೆಂಗಳೂರಿನ ಬನಶಂಕರಿ ಶ್ರೀನಿವಾಸ ನಗರದಲ್ಲಿ ವಾಸವಿದ್ದ ಮುಖೇಶ್ ದಾಸ್ (46) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ಕಳೆದ ಫೆಬ್ರವರಿ 14ರಂದು ರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಫ್ರೆಂಡ್ಸ್ ಗ್ಯಾರೇಜ್ ಬಳಿ ಲಾರಿಯೊಂದರಲ್ಲಿ ಬಂದಿದ್ದ ಚಾಲಕ, ಅಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಎರಡು ಘನ ವಾಹನಗಳ ಬೆಲೆಬಾಳುವ ಬಿಡಿಭಾಗಗಳನ್ನು ಕಳವು ಮಾಡಿದ್ದ. ಕಳವು ಮಾಡಿದ ಸೊತ್ತುಗಳನ್ನು ತನ್ನದೇ ಈಚರ್ ಲಾರಿಯಲ್ಲಿ ತುಂಬಿಸಿಕೊಂಡು ಆತ ಪರಾರಿಯಾಗಿದ್ದ. ಈ ಬಗ್ಗೆ ಗ್ಯಾರೇಜ್ ಮಾಲೀಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 96 ಸಾವಿರ ರೂ. ಮೌಲ್ಯದ ವಾಹನ ಬಿಡಿಭಾಗಗಳು, ಕೃತ್ಯಕ್ಕೆ ಬಳಸಲಾಗಿದ್ದ 15 ಲಕ್ಷ ರೂ. ಮೌಲ್ಯದ ಈಚರ್ ಲಾರಿಯನ್ನು ವಶಪಡಿಸಿದ್ದಾರೆ. ಇವುಗಳ ಸುಮಾರು 15.96 ಲಕ್ಷ ರೂ. ಅಂದಾಜಿಸಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಸುರತ್ಕಲ್ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.