ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಿಬರುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮಾತನಾಡಿದ ಅವರು, ತಾವೇ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸ್ಪಷ್ಟ ಸಂದೇಶವನ್ನು ರವಾನಿಸುವ ಮೂಲಕ ಡಿಕೆಶಿ ಅವರ ಸಿಎಂ ಕನಸು ಭಗ್ನಗೊಂಡಿದೆ.

ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, “2027-28ರ ಆರ್ಥಿಕ ವರ್ಷದ 18ನೇ ಬಜೆಟ್ ಅನ್ನು ನಾನೇ ಮಂಡಿಸಲಿದ್ದೇನೆ” ಎಂದು ಘೋಷಿಸಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಐದು ವರ್ಷಗಳ ಪೂರ್ಣ ಅವಧಿಗೆ ತಾವೇ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುವುದನ್ನು ಅವರು ಪರೋಕ್ಷವಾಗಿ ಶಾಸಕರು ಮತ್ತು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಮತ್ತು ಶಾಸಕರು ಹಾಜರಿದ್ದು, ಮುಖ್ಯಮಂತ್ರಿಗಳ ಸೂಚನೆಗಳನ್ನು ಆಲಿಸಿದರು. ಸಿದ್ದರಾಮಯ್ಯ ಅವರ ಈ ನಡೆ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.