ಬೆಳ್ಳಾರೆ: ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ಮೂಲದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ದಸ್ತಗಿರಿ ಮಾಡಿದ್ದು, ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ದಿನಾಂಕ 24.03.2022ರಂದು ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಬೆಳ್ತಂಗಡಿಯ ನೆರಿಯ ನಿವಾಸಿ ಶರತ್ ಎಸ್ (24) ಎಂಬಾತನನ್ನು ಆರೋಪಿಯೆಂದು ಗುರುತಿಸಲಾಗಿತ್ತು (ಅ.ಕ್ರ ಸಂಖ್ಯೆ: 22/2022). ಆದರೆ, ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲ ತಲೆಮರೆಸಿಕೊಂಡಿದ್ದನು.

ಬೆಳ್ಳಾರೆ ಠಾಣಾ ಪಿ.ಎಸ್.ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ಅವರು ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಕಲಂ 457 ಐಪಿಸಿ (ಮನೆಗಳ್ಳತನ): 6 ತಿಂಗಳ ಸಾಧಾರಣ ಸಜೆ ಹಾಗೂ 500 ರೂ. ದಂಡ ಹಾಗೂ ಕಲಂ 380 ಐಪಿಸಿ (ಕಳ್ಳತನ): 10 ತಿಂಗಳ ಸಾಧಾರಣ ಸಜೆ ಹಾಗೂ 500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 10 ದಿನಗಳ ಸಜೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಹೆಚ್ಚುವರಿ ಪ್ರಕರಣ ದಾಖಲು:
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಕ್ಕಾಗಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 269ರ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯವು 1000 ರೂ. ದಂಡ ಅಥವಾ 10 ದಿನಗಳ ಕಾರಾಗೃಹ ವಾಸ ವಿಧಿಸಿ ಪ್ರತ್ಯೇಕ ಆದೇಶ ಹೊರಡಿಸಿದೆ.
ಪ್ರಕರಣದ ತನಿಖಾಧಿಕಾರಿಯಾಗಿ ಪಿ.ಎಸ್.ಐ ಸಂತೋಷ್ ಬಿ.ಪಿ ಅವರು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ ವಾದ ಮಂಡಿಸಿದ್ದರು.
