ಮುಂಬೈ ಖ್ಯಾತ ಬಿಲ್ಡರ್‌ಗೆ ದಾವೂದ್ ಶಿಷ್ಯ ಛೋಟಾ ಶಕೀಲ್ ಹೆಸರಲ್ಲಿ ಬಂತು ʻಲೈವ್ ಬುಲೆಟ್’ ಸಂದೇಶ!:

ಮುಂಬೈ: ಹತ್ತಾರು ವರ್ಷಗಳ ಹಿಂದೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಹೆಸರಲ್ಲಿ ಮುಂಬೈನ ಬೀದಿಗಳಲ್ಲಿ ರಕ್ತದ ನದಿ ಹರಿಯುತ್ತಿತ್ತು. ಆ ದಿನಗಳು ಮತ್ತೆ ಮರಳಿ ಬಂದಿವೆಯೇ ಎನ್ನುವ ಅನುಮಾನ ಈಗ ಅಂಧೇರಿ ವೆಸ್ಟ್‌ನ ಆ ಕತ್ತಲೆ ಗಲ್ಲಿಗಳಲ್ಲಿ ಸುಳಿದಾಡುತ್ತಿದೆ. ಘಟನೆ ನಡೆದಿದ್ದು ಮಾರ್ಚ್ 6ರ ಮಧ್ಯಾಹ್ನ. ಬಿಲ್ಡರ್ ಮೆಹೂಲ್ ಮೆಹ್ತಾ ತನ್ನ ಕನ್ಸ್ಟ್ರಕ್ಷನ್ ಸೈಟ್‌ನಲ್ಲಿ ಮಜವಾಗಿ ಕೆಲಸ ಮಾಡಿಕೊಂಡಿದ್ದರು. ಆದರೆ ಅವರಿಗೆ ಗೊತ್ತಿರಲಿಲ್ಲ, ಸಾವಿನ ದೂತ ಹೊರಗಡೆ ಕಾರಿನ ನಂಬರ್ ಪ್ಲೇಟ್ ಹತ್ತಿರ ಅವಿತಿದ್ದಾನೆ ಅಂತ!

ಅಲ್ಲಿತ್ತು ಮರಣ ಶಾಸನ!
ಯಾವಾಗ ಮೆಹ್ತಾ ಅವರ ಬಾಡಿಗಾರ್ಡ್ ವೈಭವ್ ಕಾರಿನ ನಂಬರ್ ಪ್ಲೇಟ್ ಹತ್ತಿರ ಇದ್ದ ಆ ಪ್ಲಾಸ್ಟಿಕ್ ಪ್ಯಾಕೆಟ್ ಬಿಚ್ಚಿದನೋ, ಅವತ್ತು ಅವನ ಅಂಗೈಗೆ ಬೆವರು ಇಳಿದಿತ್ತು. ಅದರ ಒಳಗಡೆ ಇತ್ತು ಒಂದು ಲಕಲಕಿಸುವ ಜೀವಂತ ಗುಂಡು! ಅದರ ಜೊತೆಗಿದ್ದ ಆ ಪತ್ರದ ಸಾಲುಗಳು ಈಗಲೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ನಿದ್ದೆ ಕೆಡಿಸಿವೆ. ಆ ಪತ್ರದಲ್ಲಿ ಕೆತ್ತಿದಂತಿದ್ದ ಸಾಲುಗಳು ಹೀಗಿದ್ದವು: “ಮೆಹ್ತಾ, ದಾರಿಗೆ ಬಾ… ನಿನಗೆ ಅರ್ಥವಾಗ್ತಿಲ್ಲ ಅನಿಸುತ್ತೆ. ಇವತ್ತು ಈ ಬುಲೆಟ್ ಕಾರ್ ಮೇಲೆ ಇದೆ, ನಾಳೆ ನಿನ್ನ ಎದೆ ಸೀಳಿ ಒಳಗೆ ಕೂತಿರುತ್ತೆ!”

ಪಾಕಿಸ್ತಾನದ ಕರಾಚಿಯಲ್ಲಿ ಕುಳಿತು ಭಾರತದ ವಿರುದ್ಧ ವಿಷ ಉಗುಳುವ ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ಹೆಸರಲ್ಲಿ ಈ ಬೆದರಿಕೆ ಪತ್ರ ಬಂದಿದೆ. “ಮೆಂಡ್ ಯುವರ್ ವೇಸ್” (ಬುದ್ಧಿ ಕಲಿತುಕೋ) ಎನ್ನುವ ಆ ಹಳೆಯ ಭೂಗತ ಲೋಕದ ಭಾಷೆ ಮತ್ತೆ ಜೀವ ಪಡೆದುಕೊಂಡಿದೆ. ಮೆಹ್ತಾ ಅವರಿಗೆ ಯಾರ ಜೊತೆ ವ್ಯವಹಾರದ ಹಗ್ಗಜಗ್ಗಾಟ ಇತ್ತು? ಈ ಬುಲೆಟ್ ಬಂದಿದ್ದು ಕರಾಚಿಯಿಂದಲೋ ಅಥವಾ ಮುಂಬೈನ ಚಾವ್ಲುಗಳಲ್ಲಿ ಅಡಗಿರೋ ಶಕೀಲ್‌ನ ಯಾವುದೋ ಹಳೇ ಶಿಷ್ಯನಿಂದಲೋ?

ಬಣ್ಣದ ಲೋಕಕ್ಕೂ ಅಂಟಿದ ರಕ್ತದ ಕಲೆ!
ಇತ್ತೀಚೆಗಷ್ಟೇ ನಟ ರಣವೀರ್ ಸಿಂಗ್‌ಗೆ ಕೋಟಿ ಕೋಟಿ ಹಣಕ್ಕಾಗಿ ಬೆದರಿಕೆ ಬಂದಿತ್ತು, ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ಸದ್ದು ಕೇಳಿತ್ತು. ಸಲ್ಮಾನ್ ಖಾನ್ ಮತ್ತು ಸಲೀಂ ಖಾನ್ ಎದೆಯ ಮೇಲಂತೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ತೂಗುಗತ್ತಿ ಸದಾ ಇದೆ. ಇವತ್ತು ಮೆಹ್ತಾ, ನಾಳೆ ಯಾರೋ? ಮುಂಬೈ ಕ್ರೈಂ ಬ್ರಾಂಚ್‌ನ ಆಂಟಿ ಎಕ್ಸ್‌ಟಾರ್ಶನ್ ಸೆಲ್ ಈಗ ಹಗಲು ರಾತ್ರಿ ಸಿಸಿಟಿವಿ ದೃಶ್ಯಗಳನ್ನು ಜಾಲಾಡುತ್ತಿದೆ. ಆ ಪ್ಲಾಸ್ಟಿಕ್ ಪ್ಯಾಕೆಟ್ ಇಟ್ಟು ಹೋದ ಆ ಅನಾಮಧೇಯ ನೆರಳು ಯಾರು ಅಂತ ಪತ್ತೆ ಹಚ್ಚಲು ಪೊಲೀಸರು ಹೈರಾಣಾಗಿದ್ದಾರೆ.

ಎಲ್ಲಿದ್ದಾನೆ ಚೋಟಾ?

ಭಾರತೀಯ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ, ಛೋಟಾ ಶಕೀಲ್ ಈಗ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿದ್ದಾನೆ. ಅಲ್ಲಿನ ಐಎಸ್‌ಐ (ISI) ರಕ್ಷಣೆಯಲ್ಲಿ ಆತ ಮತ್ತು ಅವನ ಬಾಸ್ ದಾವೂದ್ ಇಬ್ರಾಹಿಂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಕರಾಚಿಯ ಕ್ಲಿಫ್ಟನ್ ಪ್ರದೇಶದ ಹೈ-ಸೆಕ್ಯೂರಿಟಿ ವಲಯದಲ್ಲಿ ಇವರ ನೆಲೆ ಇದೆ ಎಂದು ವರದಿಗಳು ಹೇಳುತ್ತವೆ. ಕೆಲವು ವರ್ಷಗಳ ಹಿಂದೆ ಛೋಟಾ ಶಕೀಲ್ ಅನಾರೋಗ್ಯದಿಂದ ಅಥವಾ ಗ್ಯಾಂಗ್ ವಾರ್‌ನಲ್ಲಿ ಸತ್ತು ಹೋಗಿದ್ದಾನೆ ಎಂಬ ಗಾಳಿ ಸುದ್ದಿಗಳು ಹರಿದಾಡಿದ್ದವು. ಆದರೆ, ಮುಂಬೈ ಪೊಲೀಸರಿಗೆ ಬರುವ ಇತ್ತೀಚಿನ ಹಫ್ತಾ ಕರೆಗಳು ಮತ್ತು ಬೆದರಿಕೆ ಪತ್ರಗಳನ್ನು ಗಮನಿಸಿದರೆ, ಆತ ಇನ್ನೂ ಬದುಕಿದ್ದಾನೆ ಮತ್ತು ಕರಾಚಿಯಿಂದಲೇ ತನ್ನ ಕರಾಳ ಜಾಲವನ್ನು ನಿಯಂತ್ರಿಸುತ್ತಿದ್ದಾನೆ ಎಂಬುದು ಸ್ಪಷ್ಟವಾಗುತ್ತಿದೆ.

error: Content is protected !!