ಕಾಸರಗೋಡು: ಪರಿಚಯದ ವ್ಯಕ್ತಿಯೊಬ್ಬನೇ ಸ್ನೇಹದ ಹೆಸರಿನಲ್ಲಿ ಕರೆದೊಯ್ದು, ತಂಡವೊಂದರ ಜೊತೆ ಸೇರಿ ಪೇಂಟರ್ ಒಬ್ಬರ ಮೇಲೆ ಇಡೀ ರಾತ್ರಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಣ್ವಂಗಾಡ್ ಸಮೀಪದ ಕೊಲವಯಲ್ ನಿವಾಸಿ ಶಹಾದ್ (37) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರ್ಚ್ 4ರಂದು ರಾತ್ರಿ ಸುಮಾರು 9:45ರ ವೇಳೆಗೆ ಶಹಾದ್ ಅವರ ಪರಿಚಯಸ್ಥ ಅಫ್ಸಲ್ ಎಂಬಾತ ಕಾರಿನಲ್ಲಿ ಬಂದು ರೈಡ್ ಹೋಗೋಣ ಎಂದು ಕರೆದಿದ್ದಾನೆ. ಇದನ್ನು ನಂಬಿ ಕಾರು ಹತ್ತಿದ ಶಹಾದ್ ಅವರನ್ನು ಅಫ್ಸಲ್ ನೇರವಾಗಿ ಉಪ್ಪಳದ ಕಡೆಗೆ ಕರೆದೊಯ್ದಿದ್ದಾನೆ. ಉಪ್ಪಳ ತಲುಪುತ್ತಿದ್ದಂತೆ ಅಲ್ಲಿ ಕಾಯುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ನಾಲ್ವರು ಅಪರಿಚಿತರು ಶಹಾದ್ ಅವರನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಎಳೆದುಕೊಂಡಿದ್ದಾರೆ ಎಂದು ಶಹಾದ್ ಆರೋಪಿಸಿದ್ದಾರೆ.

ರಾತ್ರಿ 10:45ರಿಂದ ಮರುದಿನ ಮುಂಜಾನೆ 6 ಗಂಟೆಯವರೆಗೆ ದುಷ್ಕರ್ಮಿಗಳ ತಂಡ ಶಹಾದ್ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ನಿರಂತರವಾಗಿ ಹಲ್ಲೆ ನಡೆಸಿದೆ. ಕಾರಿನೊಳಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ, ಕಬ್ಬಿಣದ ರಾಡ್ ಹಾಗೂ ಮುಷ್ಟಿಗಳಿಂದ ಮುಖ ಮತ್ತು ಕಾಲುಗಳಿಗೆ ತೀವ್ರವಾಗಿ ಹೊಡೆದಿದ್ದಾರೆ. ಒಮ್ಮೆ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗಲೂ ಬೆನ್ನಟ್ಟಿ ಹಿಡಿದು ಮತ್ತೆ ಕಾರಿಗೆ ತುರುಕಲಾಗಿದೆ ಎಂದು ಸಂತ್ರಸ್ತ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳಗಿನ ಜಾವ ಉಪ್ಪಳದ ಮೈದಾನವೊಂದರಲ್ಲಿ ಶಹಾದ್ ಅವರನ್ನು ಸಂಪೂರ್ಣ ನಗ್ನಗೊಳಿಸಿದ ತಂಡ, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದೆ. “ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ” ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ತೀವ್ರವಾಗಿ ಭಯಗೊಂಡಿದ್ದ ಶಹಾದ್ ಆರಂಭದಲ್ಲಿ ಮೌನವಾಗಿದ್ದರು. ಆದರೆ ಪತ್ನಿಯ ಧೈರ್ಯ ಮತ್ತು ಪ್ರೇರಣೆಯಿಂದಾಗಿ ಮಾರ್ಚ್ 6ರಂದು ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತನ ಹೇಳಿಕೆಯ ಆಧಾರದ ಮೇಲೆ ಹೊಸದುರ್ಗ ಪೊಲೀಸರು ಅಫ್ಸಲ್ ಮತ್ತು ಇತರ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ (ಹಲ್ಲೆ, ಮಾರಕ ಆಯುಧ ಬಳಸಿ ಗಾಯಗೊಳಿಸುವುದು, ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳ ಮಂಜೇಶ್ವರ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ, ಈ ಪ್ರಕರಣವನ್ನು ʻಜೀರೋ ಎಫ್‌ಐಆರ್’ ಆಗಿ ದಾಖಲಿಸಿ ಹೆಚ್ಚಿನ ತನಿಖೆಗಾಗಿ ಮಂಜೇಶ್ವರ ಠಾಣೆಗೆ ವರ್ಗಾಯಿಸಲಾಗಿದೆ.