
ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿರ್ಮಿಸಲಾಗಿರುವ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಭದ್ರತಾ ದಳದಿಂದ ಸಮ್ಮತಿ ದೊರೆತಿದ್ದು, ಇನ್ನು ಕೆಲವೇ ದಿನಗಳೊಳಗೆ ನಿಲ್ದಾಣವು ಕಾರ್ಯಾಚರಣೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಏರೋಡ್ರೋಮ್ ಪರವಾನಗಿ ನೀಡುವ ಮುನ್ನ ಮತ್ತೊಮ್ಮೆ ಪರಿಶೀಲನೆ ನಡೆಸಲಿದೆ ಎಂದು ವರದಿಯಾಗಿದೆ. ಭದ್ರತಾ ತಪಾಸಣೆಗಳು ಮುಗಿದಿದ್ದು, ಇನ್ನು ಡಿಜಿಸಿಎ ಪರಿಶೀಲನೆಯಷ್ಟೇ ಬಾಕಿಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೇ ಇನ್ನೊಂದು ವಾರದೊಳಗೆ ಡಿಜಿಸಿಎ ಸಹ ಪರಿಶೀಲನೆ ಮುಗಿಸಿ ಪರವಾನಗಿ ನೀಡುವ ಸಾಧ್ಯತೆ ಇದ್ದು, ಈ ಪರವಾನಗಿ ದೊರೆತ 45 ದಿನಗಳೊಳಗಾಗಿ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನ ಹಾಗೂ ಸರಕು ವಿಮಾನಗಳು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ಇನ್ನು ಅಂತಾರಾಷ್ಟ್ರೀಯ ವಿಮಾನಗಳು ಸೆಪ್ಟೆಂಬರ್‌ನಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪರವಾನಗಿ ದೊರೆತ ಕೂಡಲೇ, ಏರ್ ಇಂಡಿಯಾ, ಇಂಡಿಗೋ, ಆಕಾಸದಂತಹ ದೇಶೀಯ ಸಂಸ್ಥೆಗಳು ವಿಮಾನದ ಟಿಕೆಟ್ ನೀಡಲು ಆರಂಭಿಸುವ ನಿರೀಕ್ಷೆಯಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
