ಟೆಹ್ರಾನ್: ಒಂಬತ್ತು ದಿನಗಳ ಕಾಲ ನಿರಂತರವಾಗಿ ಸುರಿಯುತ್ತಿರುವ ಕ್ಷಿಪಣಿಗಳ ಮಳೆ, ಟೆಹ್ರಾನ್ ಆಕಾಶವನ್ನು ಬೆಂಕಿಯ ಜ್ವಾಲೆ ಮತ್ತು ರಕ್ತಸಿಕ್ತ ರಸ್ತೆಗಳ ನಡುವೆಯೇ ಇರಾನ್ ಇಂದು ತನ್ನ ಹೊಸ ಸುಪ್ರೀಂ ಲೀಡರ್ ಆಗಿ ಮೊಜ್ತಬಾ ಖಮೇನಿ ಅವರನ್ನು ಅಧಿಕೃತವಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಇರಾನ್ ಸಂಸತ್ತಿನ ಸ್ಪೀಕರ್ ಬಾಘರ್ ಖಾಲಿಬಾಫ್ ಅವರು “ಬೇಷರತ್ ಶರಣಾಗತಿ” ಎಂಬ ಟ್ರಂಪ್ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.

ಅಲಿ ಖಮೇನಿ ಅವರ ಹತ್ಯೆಯಾದ ಕೇವಲ ಒಂದು ವಾರದಲ್ಲಿ, ಶತ್ರು ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್‌ಗೆ ಸಡ್ಡು ಹೊಡೆಯಲು ಇರಾನ್ ತನ್ನ ಕಟು ಪರಂಪರೆಯನ್ನು ಮುಂದುವರಿಸಿದೆ. 88 ಮಂದಿ ಧರ್ಮಗುರುಗಳ ʻಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಮಧ್ಯರಾತ್ರಿ ಹೊತ್ತಿನಲ್ಲಿ ಈ ಸ್ಫೋಟಕ ನಿರ್ಧಾರವನ್ನು ಪ್ರಕಟಿಸುವ ಮೂಲಕ ಇರಾನ್‌ನಲ್ಲಿ ಈಗ ವಂಶಪಾರಂಪರ್ಯ ದೇವಪ್ರಭುತ್ವಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಮೊಜ್ತಬಾ ಕೇವಲ ಧರ್ಮಗುರುವಲ್ಲ; ಅವರು ಇರಾನ್‌ನ ಪ್ರಬಲ ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಮೇಲೆ ದಶಕಗಳಿಂದ ಹಿಡಿತ ಹೊಂದಿರುವ ವ್ಯಕ್ತಿ. ಯುದ್ಧದ ಸಮಯದಲ್ಲಿ ದೇಶದ ಆಡಳಿತವು ಸೇನಾಪಡೆಗಳ ನಿಯಂತ್ರಣದಲ್ಲಿರಬೇಕು ಎಂಬ ಉದ್ದೇಶದಿಂದಲೇ ಇರಾನ್ ಈ ನಿರ್ಧಾರ ಕೈಗೊಂಡಿದೆ. ಆದರೆ, ಪ್ರಜಾಪ್ರಭುತ್ವದ ಪರವಿರುವ ಇರಾನ್‌ನ ಯುವ ಪೀಳಿಗೆ ಈ ‘ವಾರಸುದಾರಿಕೆ’ಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

“ನಮ್ಮ ಅನುಮೋದನೆ ಇಲ್ಲದೆ ಆತ ಉಳಿಯಲಾರ” ಎಂಬ ಟ್ರಂಪ್ ಮಾತುಗಳು, ಇರಾನ್ ಮೇಲೆ ಅಮೆರಿಕ ಮತ್ತಷ್ಟು ಭೀಕರ ಆರ್ಥಿಕ ಮತ್ತು ಮಿಲಿಟರಿ ನಿರ್ಬಂಧಗಳನ್ನು ಹೇರಲಿದೆ ಎಂಬುದನ್ನು ಸೂಚಿಸುತ್ತಿವೆ. ಇತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು “ಅಸ್ಥಿರಗೊಳಿಸುವ ತಂತ್ರ”ದ ಬಗ್ಗೆ ಮಾತನಾಡುತ್ತಿರುವುದು, ಇರಾನ್‌ನ ಒಳಗಡೆಯೇ ಬಂಡಾಯ ಎಬ್ಬಿಸುವ ಅಥವಾ ಮತ್ತಷ್ಟು ಹಿರಿಯ ನಾಯಕರನ್ನು ಗುರಿಪಡಿಸುವ ಸಂಚನ್ನು ಬಿಂಬಿಸುತ್ತಿದೆ.

ಟೆಹ್ರಾನ್‌ನ ತೈಲ ಡಿಪೋಗಳ ಮೇಲೆ ಇಸ್ರೇಲ್ ನಡೆಸಿದ ಇರಾನ್‌ನ ಆರ್ಥಿಕ ಬೆನ್ನೆಲುಬನ್ನು ಮುರಿಯುವ ತಂತ್ರ. ಕಪ್ಪು ಹೊಗೆಯಿಂದ ಆವೃತವಾಗಿರುವ ಟೆಹ್ರಾನ್‌ನ ಆಕಾಶವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ತೈಲ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ವಿಮಾನಯಾನ ಮತ್ತು ಅಂತರಾಷ್ಟ್ರೀಯ ವ್ಯಾಪಾರಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಇದು ಕೇವಲ ಇರಾನ್ ಅಥವಾ ಅಮೆರಿಕದ ಸಮಸ್ಯೆಯಾಗಿ ಉಳಿಯದೆ, ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕರಾಳ ಛಾಯೆ ಬೀರಿದೆ.

ಈವರೆಗೆ 1,332ಕ್ಕೂ ಹೆಚ್ಚು ಇರಾನ್ ನಾಗರಿಕರು ಮತ್ತು 7 ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ. ಅಮೆರಿಕದ ವಿಶೇಷ ದೂತ ಜಾರೆಡ್ ಕುಶ್ನರ್ ಅವರ ಇಸ್ರೇಲ್ ಭೇಟಿ ನಾಳೆ ಇರಲಿದ್ದು, ಇದರ ಬೆನ್ನಲ್ಲೇ ಇರಾನ್ ಮೇಲೆ ಯುದ್ಧ ತೀವ್ರಗೊಳ್ಳಲಿದೆ. ಇರಾನ್ ಸಂಸತ್ತಿನ ಸ್ಪೀಕರ್ ಬಾಘರ್ ಖಾಲಿಬಾಫ್ ಅವರು “ಬೇಷರತ್ ಶರಣಾಗತಿ” ಎಂಬ ಟ್ರಂಪ್ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಹೀಗಾಗಿ, ಬರುವ ದಿನಗಳಲ್ಲಿ ಈ ಸಂಘರ್ಷವು ಪರಮಾಣು ನೆಲೆಗಳ ಮೇಲೆ ದಾಳಿಯಾಗುವ ಅಥವಾ ಪೂರ್ಣ ಪ್ರಮಾಣದ ಭೂಸೇನಾ ಯುದ್ಧಕ್ಕೆ ತಿರುಗುವ ಅಪಾಯವಿದೆ.
