“ಯಕ್ಷಗಾನ ತರಬೇತಿಯು ಮಕ್ಕಳಲ್ಲಿ ಪ್ರೌಢಿಮೆಯನ್ನು ಪರಿಪೂರ್ಣತೆಯನ್ನು ತುಂಬುತ್ತದೆ” -ರಮೇಶ್ ಭಟ್ ಎಸ್.ಜಿ.

ಸುರತ್ಕಲ್ ಬಂಟರ ಸಂಘದಲ್ಲಿ “ಯಕ್ಷಸಿರಿ” ನಾಲ್ಕನೇ ವಾರ್ಷಿಕೋತ್ಸವ

ಸುರತ್ಕಲ್: ಸುರತ್ಕಲ್ ಬಂಟರ ಸಂಘದ ಯಕ್ಷಗಾನ ತರಬೇತಿ ಕೇಂದ್ರ “ಯಕ್ಷಸಿರಿ“ ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಗೋವಿಂದ ದಾಸ್ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ರಮೇಶ್ ಭಟ್ ಎಸ್.ಜಿ. ಅವರು, ”ಯಕ್ಷಗಾನ ಇಂದು ದೇಶದ ಗಡಿಯನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದು ಯಕ್ಷಗಾನ ಪ್ರೇಮಿಗಳಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಯಕ್ಷಸಿರಿಯ ಮೂಲಕ ಮಕ್ಕಳಿಗೆ ಯಕ್ಷಗಾನ ಕಲಿಸುವುದು ಮಾತ್ರವಲ್ಲದೆ ಅವರಿಗೆ ಪ್ರೌಢಿಮೆಯನ್ನು ಪರಿಪೂರ್ಣತೆಯನ್ನು ತುಂಬುತ್ತದೆ. ಮಕ್ಕಳನ್ನು ಕೇವಲ ತರಬೇತಿಗೆ ಸೇರಿಸಿ ಸುಮ್ಮನಾದರೆ ಸಾಲದು, ಯಕ್ಷಗಾನ ನೋಡಲು ಹೋಗುವಾಗಲೂ ಕರೆದುಕೊಂಡು ಹೋಗಿ ಇದರಿಂದ ಬೆಳೆಯುತ್ತಲೇ ಮಕ್ಕಳು ನಮ್ಮ ಸಂಸ್ಕೃತಿಯನ್ನು ಅರಿತುಕೊಂಡು ಉತ್ತಮ ಕಲಾವಿದರಾಗುತ್ತಾರೆ“ ಎಂದರು.


ಯಕ್ಷಗಾನ ಕಲಾ ಸಂಘಟಕ ಮಾಧವ ಎಸ್.ಶೆಟ್ಟಿ ಬಾಳ ಮಾತಾಡಿ “ಮೊದಲ ಮಹಿಳಾ ಯಕ್ಷಗಾನ ತಂಡ ಸ್ಥಾಪನೆಯಾಗಿದ್ದು ನಮ್ಮ ಬಾಳದಲ್ಲಿ ಮಹಾಗಣಪತಿ ಯಕ್ಷಗಾನ ತಂಡ. ನಂತರದ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಮಹಿಳಾ ಯಕ್ಷಗಾನ ತಂಡಗಳು ಶುರುವಾದವು. ಅಂದಿನ ದಿನಗಳಲ್ಲಿ ಯಕ್ಷಗಾನ ತರಬೇತಿ ನೀಡುವುದು ತುಂಬಾ ಕಷ್ಟವಿತ್ತು ಆದರೆ ಈಗ ಹೆಚ್ಚೆಚ್ಚು ಜನರು ಯಕ್ಷಗಾನ ಕಲಿಕೆಗೆ ಆಸಕ್ತಿ ವಹಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಇಂತಹ ಕಾರ್ಯಕ್ರಮ ನಿತ್ಯ ನಿರಂತರವಾಗಿ ನಡೆಯಲಿ“ ಎಂದರು.
ಇನ್ನೋರ್ವ ಅತಿಥಿ ಇಡ್ಯ ಕಟ್ಲ ಶ್ರೀ ಸತ್ಯನಾರಾಯಣ ಮತ್ತು ಶನಿದೇವರ ಪೂಜಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ ಮಾತನಾಡಿ ಯಕ್ಷಗಾನದಲ್ಲಿ ಮಕ್ಕಳು ಸಕ್ರೀಯವಾಗಿ ಭಾಗವಹಿಸಿದಾಗ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.


ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸುರತ್ಕಲ್ ಬಂಟರ ಸಂಘ ಹಿಂದಿನಿಂದಲೂ ಯಕ್ಷಗಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡುತ್ತ ಬಂದಿದೆ. ತರಬೇತಿ ಕಾರ್ಯಕ್ರಮ ಪ್ರಾರಂಭವಾಗುವಾಗ 150 ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು. ಇಂದು 75ರಷ್ಟು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಸಂಯೋಜನೆ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿ” ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಇಂಡಿಯನ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಏರಿಯ ಡೆವಲಪ್ ಮೆಂಟ್ ಅಧಿಕಾರಿ ಸುಮಾ ಚಂದ್ರಶೇಖರ್ ಎಂ.ಎ, ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಯಕ್ಷಧ್ರುವ ಪಟ್ಲಫೌಂಡೇಶನ್ ಟ್ರಸ್ಟ್ ನ ಕೇಂದ್ರಿಯ ಮಹಿಳಾ ಘಟಕದ ಸಂಚಾಲಕಿ ಸಹನಾ ರಾಜೇಶ್ ರೈ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ತಾರಾನಾಥ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಯಕ್ಷಸಿರಿ ಸಂಚಾಲಕಿ ಕವಿತಾ ಪುಷ್ಪರಾಜ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅನೂಪ್ ಶೆಟ್ಟಿ ಕಟ್ಲ ದೇವರನ್ನು ಸ್ತುತಿಸಿದರು. ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ ಸುಧಾ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕವಿತಾ ಪುಷ್ಪರಾಜ್ ಶೆಟ್ಟಿ ವಂದಿಸಿದರು.


ಬಳಿಕ ಯಕ್ಷಸಿರಿ ಸಂಘಟನೆಯ ರಾಕೇಶ್ ರೈ ಅಡ್ಕ ಅವರ ಶಿಷ್ಯ ವೃಂದದಿಂದ “ದಶಾವತಾರ” ಯಕ್ಷಗಾನ ಬಯಲಾಟ ನಡೆಯಿತು‌.

Advt
error: Content is protected !!