ಕಾರ್ಕಳ: ಪಳ್ಳಿ ಗ್ರಾಮದ ಕೊಡಿಮಲೆಯಲ್ಲಿ ನಿರ್ಮಾಣವಾಗುತ್ತಿರುವ ಫಿಶ್ ಮೀಲ್ ಕಂಪೆನಿ ವಿರುದ್ಧ ಗ್ರಾಮಸ್ಥರು ಒಗ್ಗಟ್ಟಾಗಿದ್ದು ಈಗಾಗಲೇ ಪಂಚಾಯತ್ ಎದುರು ಪ್ರತಿಭಟನೆ ನಡೆದಿದೆ. ಸ್ಥಳಕ್ಕೆ ಪಂಚಾಯತ್ ಪಿಡಿಓ, ತಹಶೀಲ್ದಾರ್ ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ. ಆದರೂ ಕಾಮಗಾರಿ ಮುಂದುವರಿದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಇಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.


ಪಳ್ಳಿ ಕೊಡಿಮಲೆ ಪರಿಸರದ ಗ್ರಾಮಸ್ಥರು ಮನವಿ ನೀಡಿದ್ದು ಸಮಸ್ಯೆಯ ಕುರಿತು ವಿವರವಾಗಿ ಶಾಸಕರಿಗೆ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಶಾಸಕರು ಯಾವುದೇ ಕಾರಣಕ್ಕೂ ಸ್ಥಳಿಯ ಆಡಳಿತದ ಹಾಗೂ ಪರಿಸರದ ಜನತೆಗೆ ತಿಳಿಸದೆ ಮತ್ತವರ ಒಪ್ಪಿಗೆಯಿಲ್ಲದೇ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ನಾನು ನಿಮ್ಮ ಜೊತೆ ಯಾವಾಗಲೂ ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳಿಗೆ ಮೀನಿನ ಕಾರ್ಖಾನೆಗೆ ಸಂಬಂಧ ಪಟ್ಟವರಿಗೆ ಯಾವುದೇ ಪರವಾನಿಗೆ ನೀಡದಂತೆ ತಿಳಿಸುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ಹೇಳಿದ್ದಾರೆ.